ಭಯೋತ್ಪಾದಕ ದಾಳಿಗೆ ಪ್ರತೀಕಾರಕ್ಕಿಂತ ಮೊದಲು ಮೋದಿ - ಶಾ ರಾಜೀನಾಮೆ ಕೇಳಿ: ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಆಗ್ರಹ

ಸುಬ್ರಹ್ಮಣ್ಯನ್ ಸ್ವಾಮಿ | PTI
ಹೊಸದಿಲ್ಲಿ: ಭಯೋತ್ಪಾದಕ ದಾಳಿಗೆ ಪ್ರತೀಕಾರ ಕೇಳುವ ಬದಲು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಯನ್ನು ಮೊದಲು ಕೇಳಬೇಕು ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಪಹಲ್ಗಾಮ್ ನಲ್ಲಿ ಏಪ್ರಿಲ್ 22ರಂದು ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ 26 ಮಂದಿ ಮೃತಪಟ್ಟಿದ್ದರು. ದಾಳಿಯ ಹಿಂದೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಯ ಕೈವಾಡವಿರುವುದರಿಂದ, ದಾಳಿಗೆ ಪ್ರತೀಕಾರವನ್ನು ತೀರಿಸುವಂತೆ ಆಕ್ರೋಶ ವ್ಯಕ್ತವಾಗಿತ್ತು. ಈ ಮಧ್ಯೆ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ ಮಾಡಿರುವ ಪೋಸ್ಟ್ ಕುತೂಹಲ ಮೂಡಿಸಿದೆ
ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ, "ಪ್ರತೀಕಾರ ಕೇಳುವ ಬದಲು, ಮೋದಿ - ಶಾ ಅವರ ರಾಜೀನಾಮೆಯನ್ನು ಮೊದಲು ಕೇಳಿ. ಅವರು ಏನೆಂದು ಹಲವು ಬಾರಿ ಗೊತ್ತಾಗಿದೆ. ಚೀನಾ, ಪಾಕಿಸ್ತಾನ, ಮಾಲ್ಡೀವ್ಸ್, ಬಾಂಗ್ಲಾದೇಶಗಳ ವಿಚಾರದಲ್ಲಿ ಇಬ್ಬರೂ ಶರಣಾಗಿದ್ದರು. ಭಾರತ ಮಾತೆಯನ್ನು ಅವಮಾನಿಸಲಾಗಿತ್ತು", ಎಂದು ತಿಳಿಸಿದ್ದಾರೆ.
ಸುಬ್ರಹ್ಮಣ್ಯನ್ ಸ್ವಾಮಿ ಅವರ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ರಾಜಕೀಯ ಮಾಡುವ ಸಮಯವಲ್ಲ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.