ನ್ಯೂಸ್ ಕ್ಲಿಕ್ ಪ್ರಕರಣ: ಪೊಲೀಸರು ವಶಪಡಿಸಿಕೊಂಡಿರುವ ವಿದ್ಯುನ್ಮಾನ ಸಾಧನಗಳ ಬಿಡುಗಡೆಗೆ ಪುರಕಾಯಸ್ಥ ಮನವಿ

Update: 2023-10-27 16:23 GMT

Photo: newsclick.com

ಹೊಸದಿಲ್ಲಿ: ‘ನ್ಯೂಸ್ ಕ್ಲಿಕ್’ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರು, ದಿಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ತನ್ನ ವಿದ್ಯುನ್ಮಾನ ಸಾಧನಗಳನ್ನು ಬಿಡುಗಡೆಗೊಳಿಸುವಂತೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ನಡುವೆ ‘ನ್ಯೂಸ್ ಕ್ಲಿಕ್’ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಜಾಮೀನು ಕೋರಿ ಇದೇ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.

ಇಬ್ಬರನ್ನೂ ಚೀನಾದ ಪರ ಪ್ರಚಾರ ಮಾಡಲು ನ್ಯೂಸ್ ಪೋರ್ಟಲ್ ‘ನ್ಯೂಸ್ ಕ್ಲಿಕ್’ ದೊಡ್ಡ ಪ್ರಮಾಣದ ಹಣ ಸ್ವೀಕರಿಸಿರುವ ಆರೋಪಕ್ಕೆ ಸಂಬಂಧಿಸಿ ಯುಎಪಿಎ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ಬಂಧಿಸಿದ್ದರು.

ಈ ಪ್ರಕರಣವನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಾ. ಹರ್ದೀಪ್ ಕೌರ್ ಅವರ ಮುಂದೆ ಶುಕ್ರವಾರ ಪಟ್ಟಿ ಮಾಡಲಾಯಿತು. ಎರಡೂ ಪ್ರಕರಣಗಳ ಕುರಿತು ಪ್ರತಿಕ್ರಿಯೆ ಸಲ್ಲಿಸಲು ದಿಲ್ಲಿ ಪೊಲೀಸರು ಸಮಯಾವಕಾಶ ಕೋರಿದರು.

ನ್ಯಾಯಾಲಯ ಪ್ರಬೀರ್ ಪುರಕಾಯಸ್ಥ ಅವರ ಅರ್ಜಿಯನ್ನು ಅಕ್ಟೋಬರ್ 31ರಂದು ಹಾಗೂ ಅಮಿತ್ ಚಕ್ರವರ್ತಿ ಅವರ ಜಾಮೀನು ಅರ್ಜಿಯನ್ನು ನವೆಂಬರ್ 4ರಂದು ವಿಚಾರಣೆ ನಡೆಸಲು ದಿನ ನಿಗದಿ ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News