ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕಾನೂನುಗಳನ್ನು ಹಿಂದೆಗೆದುಕೊಳ್ಳುವಂತೆ ಸುದ್ದಿಸಂಸ್ಥೆಗಳು, ಡಿಜಿಟಲ್ ಹಕ್ಕುಗಳ ಗುಂಪುಗಳ ಆಗ್ರಹ
ಹೊಸದಿಲ್ಲಿ: ದೇಶದಲ್ಲಿಯ ಸುದ್ದಿಸಂಸ್ಥೆಗಳು ಮತ್ತು ಡಿಜಿಟಲ್ ಹಕ್ಕುಗಳ ಸಂಘಟನೆಗಳು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉದ್ದೇಶವನ್ನು ಹೊಂದಿರುವ ನೂತನ ಕಾನೂನುಗಳನ್ನು ಹಿಂದೆಗೆದುಕೊಳ್ಳುವಂತೆ ಸರಕಾರವನ್ನು ಆಗ್ರಹಿಸಿ ನಿರ್ಣಯವೊಂದನ್ನು ಇತ್ತೀಚಿಗೆ ಅಂಗೀಕರಿಸಿವೆ ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ,ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯ್ದೆ,ಪತ್ರಿಕೆಗಳು ಮತ್ತು ನಿಯತಕಾಲಿಕಗಳ ನೋಂದಣಿ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ನಿಯಮಗಳು: ಇವುಗಳನ್ನು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಭಾರತೀಯ ಪತ್ರಕರ್ತರ ಒಕ್ಕೂಟ, ದಿಲ್ಲಿ ಪತ್ರಕರ್ತರ ಒಕ್ಕೂಟ, ಡಿಜಿಪಬ್ ನ್ಯೂಸ್ ಫೌಂಡೇಷನ್, ಇಂಟರ್ನೆಟ್ ಫ್ರೀಡಂ ಫೌಂಡೇಷನ್, ಕಾರ್ಯನಿರತ ಸುದ್ದಿ ಕ್ಯಾಮೆರಾಮನ್‌ಗಳ ಸಂಘ,ಇಂಡಿಯನ್ ವಿಮೆನ್ಸ್ ಪ್ರೆಸ್ ಕಾರ್ಪ್ಸ್,ಕೊಗಿಟೊ ಮೀಡಿಯಾ ಫೌಂಡೇಷನ್ ಹಾಗು ಮುಂಬೈ,ಕೋಲ್ಕತಾ,ತಿರುವನಂತಪುರ ಮತ್ತು ಚಂಡಿಗಡ ಪ್ರೆಸ್‌ಕ್ಲಬ್‌ಗಳು ಭಾಗವಹಿಸಿದ್ದ ಮೇ 28ರ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಈ ಕಾನೂನುಗಳ ಮೂಲಕ ನಾಗರಿಕರ ತಿಳಿದುಕೊಳ್ಳುವ ಹಕ್ಕಿನ ಮೇಲೆ ನಿಯಂತ್ರಣ ಮತ್ತು ಅಸಮಂಜಸ ನಿರ್ಬಂಧಗಳ ಬಗ್ಗೆ ಸುದ್ದಿಸಂಸ್ಥೆಗಳು ಮತ್ತು ಡಿಜಿಟಲ್ ಹಕ್ಕುಗಳ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
ಮುಖ್ಯವಾಗಿ,ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯ್ದೆಯು ಸಾರ್ವಜನಿಕ ಹಿತಾಸಕ್ತಿಯಲ್ಲಿ ಸರಕಾರಗಳು ಮತ್ತು ಸರಕಾರಿ ಅಧಿಕಾರಿಗಳ ಕಾರ್ಯ ನಿರ್ವಹಣೆಯ ಕುರಿತು ಮಹತ್ವದ ಮಾಹಿತಿಗಳನ್ನು ಹೊರಗೆಳೆಯಲು ಪತ್ರಕರ್ತರಿಗೆ ಪ್ರಮಖ ಸಾಧನವಾಗಿರುವ ಮಾಹಿತಿ ಹಕ್ಕು ಕಾಯ್ದೆಯ ಮಹತ್ವದ ವಿಭಾಗವನ್ನೇ ಮೊಟಕುಗೊಳಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿರುವ ನಿರ್ಣಯವು,ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸುವ ಇಂತಹ ಎಲ್ಲ ನಿಬಂಧನೆಗಳನ್ನು ಕೇಂದ್ರವು ಕೈಬಿಡಬೇಕು ಅಥವಾ ತಿದ್ದುಪಡಿಗೊಳಿಸಬೇಕು ಎಂದು ಆಗ್ರಹಿಸಿದೆ.
ಶುಕ್ರವಾರ ಹೊರಡಿಸಿರುವ ಹೇಳಿಕೆಯಲ್ಲಿ ಸಂಸತ್ತಿನ ಕಾಯ್ದೆಯ ಮೂಲಕ ಸ್ಥಾಪಿತ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಬದಲಿಗೆ ಪ್ರಸಾರ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಒಳಗೊಂಡ ಮೀಡಿಯಾ ಕೌನ್ಸಿಲ್‌ನ್ನು ಅಸ್ತಿತ್ವಕ್ಕೆ ತರಬೇಕು ಎಂದೂ ಆಗ್ರಹಿಸಲಾಗಿದೆ.
ನಿರಂತರವಾಗಿ ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರದಿಂದ ಹೊರಹೊಮ್ಮುವ ಸವಾಲುಗಳನ್ನು ಎದುರಿಸಲು ಮೀಡಿಯಾ ಕೌನ್ಸಿಲ್‌ಗೆ ಅಧಿಕಾರವನ್ನು ನೀಡಬೇಕು ಎಂದು ತಿಳಿಸಿರುವ ಹೇಳಿಕೆಯು,ಅದು ಕಾರ್ಯನಿರತ ಪತ್ರಕರ್ತರು,ಒಕ್ಕೂಟಗಳ ಪ್ರತಿನಿಧಿಗಳು, ಮಾಲಕರು ಮತ್ತು ಸರಕಾರವನ್ನು ಒಳಗೊಂಡಿರಬೇಕು. ಮಾಧ್ಯಮ ಸಂಸ್ಥೆಗಳು,ಪ್ರಕಟಣೆಗಳು, ಪ್ರಸಾರ ಮತ್ತು ಡಿಜಿಟಲ್ ರೂಪದಲ್ಲಿ ಪ್ರಕಟಿತ ವಿಷಯಗಳು ಮತ್ತು ಮಾಲಿಕರ ಮೇಲೆ ಕಟ್ಟುಪಾಡುಗಳನ್ನು ಹೇರಲು ಮತ್ತು ಇಂತಹ ಇತರ ಕ್ರಮಗಳನ್ನು ಕೈಗೊಳ್ಳಲು ಅಧಿಕಾರವನ್ನು ನೀಡಬೇಕು ಎಂದು ತಿಳಿಸಿದೆ.