ವಾಹನಗಳ ಹಾರ್ನ್ ಗಳಿಗೆ ಭಾರತೀಯ ವಾದ್ಯಸಂಗೀತ ಬಳಕೆಗೆ ಕಾನೂನು ತರಲು ಕೇಂದ್ರ ಸಚಿವ ಗಡ್ಕರಿ ಯೋಜನೆ

Image Source: PTI
ಹೊಸದಿಲ್ಲಿ: ವಾಹನಗಳ ಹಾರ್ನ್ಗಳಾಗಿ ಭಾರತೀಯ ವಾದ್ಯಸಂಗೀತವನ್ನು ಕಡ್ಡಾಯಗೊಳಿಸಿ ಕಾನೂನೊಂದನ್ನು ತರುವುದನ್ನು ತಾನು ಪರಿಶೀಲಿಸುತ್ತಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಸೋಮವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಕೊಳಲು, ತಬ್ಲಾ, ವಯಲಿನ್ ಮತ್ತು ಹಾರ್ಮೋನಿಯಮ್ ನಂತಹ ಸಂಗೀತ ಉಪಕರಣಗಳ ಶಬ್ದಗಳನ್ನು ಬಳಸಿ ವಾಹನಗಳ ಹಾರ್ನ್ ಗಳನ್ನು ಹೆಚ್ಚು ಆಹ್ಲಾದಕರವನ್ನಾಗಿಸುವುದು ಇದರ ಉದ್ದೇಶವಾಗಿದೆ ಎಂದರು.
ದೇಶದ ಶೇ.40ರಷ್ಟು ವಾಯುಮಾಲಿನ್ಯಕ್ಕೆ ಸಾರಿಗೆ ಕ್ಷೇತ್ರವೇ ಕಾರಣವಾಗಿದೆ ಎಂದು ಎತ್ತಿ ತೋರಿಸಿದ ಅವರು, ಇದನ್ನು ಎದುರಿಸಲು ಕೇಂದ್ರ ಸರಕಾರವು ಮಿಥೆನಾಲ್ ಮತ್ತು ಎಥೆನಾಲ್ ನಂತಹ ಹಸಿರು ಮತ್ತು ಜೈವಿಕ ಇಂಧನಗಳ ಬಳಕೆಯನ್ನು ಉತ್ತೇಜಿಸುತ್ತಿದೆ ಎಂದು ಹೇಳಿದರು.
ಭಾರತದ ಆಟೊಮೊಬೈಲ್ ಉದ್ಯಮದ ಸಾಮರ್ಥ್ಯವನ್ನೂ ಎತ್ತಿ ತೋರಿಸಿದ ಅವರು,ದ್ವಿಚಕ್ರ ವಾಹನಗಳು ಮತ್ತು ಕಾರುಗಳ ರಫ್ತಿನಿಂದ ದೇಶವು ಗಮನಾರ್ಹ ಆದಾಯವನ್ನು ಗಳಿಸುತ್ತಿದೆ. 2014ರಲ್ಲಿ 14 ಲಕ್ಷ ಕೋಟಿ ರೂ.ಗಳ ಮೌಲ್ಯವನ್ನು ಹೊಂದಿದ್ದ ವಾಹನ ಉದ್ಯಮವು ಇಂದು 22 ಲಕ್ಷ ಕೋಟಿ ರೂ.ಗಳಿಗೆ ಬೆಳೆದಿದೆ ಎಂದರು.
ಭಾರತವು ಜಪಾನನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ಆಟೊಮೊಬೈಲ್ ಮಾರುಕಟ್ಟೆಯ ಸ್ಥಾನವನ್ನು ಪಡೆದಿದೆ. ಅಮೆರಿಕ ಮತ್ತು ಚೀನಾ ಮಾತ್ರ ಭಾರತಕ್ಕಿಂತ ಮುಂದಿವೆ ಎಂದು ಪ್ರಕಟಿಸಿದ ಗಡ್ಕರಿ,ಯುಟಿಲಿಟಿ ವಾಹನಗಳ ಮಾರಾಟದಲ್ಲಿ ನಿರಂತರ ಏರಿಕೆಯಿಂದಾಗಿ ಪ್ರಯಾಣಿಕರ ವಾಹನ(ಪಿವಿ) ವಿಭಾಗವು 2025ರಲ್ಲಿ ದೇಶಿಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ಪ್ರಭಾವಿ ಪ್ರದರ್ಶನವನ್ನು ನೀಡಿದೆ ಎಂದು ತಿಳಿಸಿದರು.