ತೀವ್ರ ವಿರೋಧದ ಬಳಿಕ ಉಲ್ಟಾ ಹೊಡೆದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರಕಾರ

Update: 2024-09-27 07:27 GMT

ಸಚಿವ ವಿಕ್ರಮಾದಿತ್ಯ ಸಿಂಗ್ (PTI)

ಶಿಮ್ಲಾ: ರಸ್ತೆ ಬದಿ ವರ್ತಕರು ತಮ್ಮ ಹೆಸರು, ವಿಳಾಸ ಪ್ರದರ್ಶಿಸುವುದು ಕಡ್ಡಾಯ ಎಂಬ ಹೇಳಿಕೆ ನೀಡಿದ್ದ ಹಿಮಾಚಲ ಪ್ರದೇಶ ಸರಕಾರದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದರ ಬೆನ್ನಿಗೇ, ಈ ಬಗ್ಗೆ ಇನ್ನೂ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಹಿಮಾಚಲ ಪ್ರದೇಶ ಸರಕಾರ ಸ್ಪಷ್ಟನೆ ನೀಡಿದೆ.

ರಸ್ತೆ ಬದಿ ವರ್ತಕರು, ವಿಶೇಷವಾಗಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ವರ್ತಕರು ಕಡ್ಡಾಯವಾಗಿ ತಮ್ಮ ಹೆಸರು, ವಿಳಾಸ ಹೊಂದಿರುವ ಗುರುತಿನ ಚೀಟಿಯನ್ನು ಪ್ರದರ್ಶಿಸಬೇಕು ಎಂದು ರಾಜ್ಯ ಲೋಕೋಪಯೋಗಿ ಮತ್ತು ನಗರಾಭಿವೃದ್ಧಿ ಸಚಿವರಾದ ವಿಕ್ರಮಾದಿತ್ಯ ಸಿಂಗ್ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದರು.

ಅವರ ಈ ನಿರ್ಧಾರವು ಉತ್ತರ ಪ್ರದೇಶ ಸರಕಾರ ಕೈಗೊಂಡ ನಿರ್ಧಾರದಂತೆಯೇ ಇತ್ತು.

ಆದರೆ, ಸಚಿವ ವಿಕ್ರಮಾದಿತ್ಯ ಸಿಂಗ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೆ, ಇಂತಹ ಯಾವುದೇ ನಿರ್ಧಾರವನ್ನು ನಾವು ಈವರೆಗೆ ಕೈಗೊಂಡಿಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟನೆ ನೀಡಿದೆ.

ಹಿಮಾಚಲ ಪ್ರದೇಶದಲ್ಲಿ ವಲಸಿಗರ ಪ್ರಮಾಣ ಹೆಚ್ಚಳವಾಗುತ್ತಿದೆ ಎಂಬ ಸ್ಥಳೀಯರ ಕಳವಳದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ವಿಕ್ರಮಾದಿತ್ಯ ಸಿಂಗ್ ಹೇಳಿದ್ದರು. ಆದರೆ, ಅವರ ಈ ಹೇಳಿಕೆಗೆ ಇಂಡಿಯಾ ಮೈತ್ರಿಪಕ್ಷಗಳಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News