"ಮುಜೆ ಭಕ್ಷೀಸ್ ದೋ..." ಅರ್ನಬ್ ಸಹಿತ ಮಡಿಲ ಮೀಡಿಯಾಗಳಿಗೆ ಚಾಟಿ ಬೀಸಿದ ಕಾಂಗ್ರೆಸ್ ವೀಡಿಯೊ
ಹೊಸದಿಲ್ಲಿ: ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯನ್ನು ಗುರಿಯಾಗಿಸಿಕೊಂಡು ಒಂದು ವರ್ಗದ ಮುಖ್ಯವಾಹಿನಿ ಮಾಧ್ಯಮಗಳ ಮೇಲೆ ಚಾಟಿ ಬೀಸಿರುವ ಕಾಂಗ್ರೆಸ್ ಪಕ್ಷದ ಜಾಹಿರಾತೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆ ಜಾಹಿರಾತಿನಲ್ಲಿ, ಇಬ್ಬರು ರಾಜಕಾರಣಿಗಳ ಪಕ್ಕ ಕುಳಿತಿರುವ ಅರ್ನಬ್ ಗೋಸ್ವಾಮಿ ಹೋಲುವ ನಟ ಸರಕಾರದ ಮೇಲೆ ಪ್ರಶಂಸೆಯ ಸುರಿಮಳೆಗೈಯ್ಯುತ್ತಾರೆ. ಕ್ಯಾಮೆರಾದ ಚಿತ್ರೀಕರಣ ಸ್ಥಗಿತಗೊಂಡು, ಕಾರ್ಯಕ್ರಮದ ಪ್ರಸಾರ ಕೊನೆಗೊಂಡ ನಂತರ, ಅವರು ರಾಜಕಾರಣಿಗಳ ತೊಡೆಯ ಮೇಲೆ ಕುಳಿತಿರುವುದು ಕಂಡು ಬರುತ್ತದೆ.
ಆಗ ಹಿನ್ನೆಲೆ ಧ್ವನಿಯಲ್ಲಿ, "ಒಂದು ವೇಳೆ ಮಾಧ್ಯಮವು ಮಡಿಲಲ್ಲಿ ಕುಳಿತುಕೊಂಡರೆ ಸಂವಿಧಾನವೂ ಉಳಿಯುವುದಿಲ್ಲ, ಪ್ರಜಾಪ್ರಭುತ್ವವೂ ಕೂಡಾ" ಎಂದು ಕೇಳಿ ಬರುತ್ತದೆ.
ತೀವ್ರ ಟ್ರೋಲ್‌ಗೆ ಗುರಿಯಾಗಿದ್ದ "ಪ್ರಧಾನಿ ನರೇಂದ್ರ ಮೋದಿ ಉಕ್ರೇನ್-ರಶ್ಯ ಯುದ್ಧವನ್ನು ನಿಲ್ಲಿಸಿದರು" ಎಂದು ಮಹಿಳೆಯೊಬ್ಬಳು ತನ್ನ ತಂದೆಗೆ ಹೇಳುತ್ತಿರುವ ಬಿಜೆಪಿ ಜಾಹಿರಾತಿನತ್ತ ಬೊಟ್ಟು ಮಾಡಿರುವ ಕಾಂಗ್ರೆಸ್ ಜಾಹಿರಾತಿಗೆ "ಅಪ್ಪ ಯುದ್ಧ ನಿಲ್ಲಿಸಿದರು" ಎಂಬ ಶೀರ್ಷಿಕೆ ನೀಡಲಾಗಿದೆ. ಈ ಜಾಹಿರಾತು ಬೆಲೆಯೇರಿಕೆ ವಿರುದ್ಧ ಸರಕಾರಕ್ಕೆ ರಕ್ಷಣೆ ಒದಗಿಸಿರುವ ಒಂದು ವರ್ಗದ ಮಾಧ್ಯಮಗಳನ್ನೂ ಗುರಿಯಾಗಿಸಿಕೊಂಡಿದೆ.
ಸಾಹೇಬರು ದೇಶಕ್ಕೆ ನೀಡಿರುವ ಸೂಚನೆಯ ಬಗ್ಗೆ ದೇಶಕ್ಕೆ ತಿಳಿದಿದೆ ಎಂದು ಹೇಳುವ ನಿರೂಪಕನ ಮಾತು ಪ್ರಧಾನಿ ನರೇಂದ್ರ ಮೋದಿಯನ್ನು ಉದ್ದೇಶಿಸಿದಂತಿದೆ. ನಂತರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟು ಇಳಿಕೆಯಾಗಿದೆ ಎಂದರೆ, ಅವನ್ನು ನೀರಿಗೆ ಬದಲಾಗಿ ಬಳಸಲಾಗುತ್ತಿದೆ ಎಂದು ನಿರೂಪಕ ಹೇಳುತ್ತಾನೆ. ಹಾಲು ಮತ್ತು ತರಕಾರಿಗಳನ್ನು ಕೊಳ್ಳಲು ಕೆಲವೇ ಪೈಸೆಗಳು ಸಾಕು ಎಂತಲೂ ಆತ ಹೇಳುತ್ತಾನೆ.
ವಿದೇಶಗಳಿಗೆ ಪ್ರಯಾಣಿಸಲು ಇನ್ನು ಮುಂದೆ ಯಾವುದೇ ವೀಸಾಗಳ ಅಗತ್ಯವಿಲ್ಲ; ಭಾರತದ ಪಾಸ್‌ಪೋರ್ಟ್ ಒಂದೇ ಸಾಕು. ರೂಪಾಯಿಯ ಮೌಲ್ಯ ಎಷ್ಟು ಗಗನಕ್ಕೇರಿದೆಯೆಂದರೆ, ಅದನ್ನು ಕೆಳಗೆ ತರಲು ರಾಕೆಟ್ ಬಳಸಲಾಗುತ್ತಿದೆ ಎಂದೂ ಆ ನಿರೂಪಕ ಹೇಳುತ್ತಾನೆ.
ಆ 58 ಸೆಕೆಂಡ್‌ಗಳ ವಿಡಿಯೊ ಅಂತ್ಯದಲ್ಲಿ ಸ್ಟುಡಿಯೊ ಸಜ್ಜಿಕೆಯನ್ನು ತೆಗೆದ ನಂತರ, ಕ್ಯಾಮೆರಾ ಕಣ್ಣು ಹತ್ತಿರಕ್ಕೆ ಹೋದಾಗ ಆ ನಿರೂಪಕನು ಇಬ್ಬರು ರಾಜಕಾರಣಿಗಳ ತೊಡೆಯ ಮೇಲೆ ಕುಳಿತಿರುವುದು ಕಂಡು ಬರುತ್ತದೆ. ಆತ ನನಗೆ ಭಕ್ಷೀಸು ಕೊಡಿ, ನನಗೆ ಭಕ್ಷೀಸು ಕೊಡಿ ಎಂದು ಪುನರಾವರ್ತಿಸಿದಾಗ (ಅರ್ನಬ್ ಗೋಸ್ವಾಮಿಯ ಪ್ರಖ್ಯಾತ "ಮುಜೆ ಡ್ರಗ್ಸ್ ದೊ, ಮುಜೆ ಡ್ರಗ್ಸ್ ದೊ" ಎಂಬ ಸಂಭಾಷಣೆಯಂತೆ) ಆ ಇಬ್ಬರು ರಾಜಕಾರಣಿಗಳು ಆತನಿಗೆ ಲಾಲಿಪಾಪ್ ನೀಡುತ್ತಾರೆ. ಆಗ ಹಿನ್ನೆಲೆ ಧ್ವನಿಯಲ್ಲಿ "ಒಂದು ವೇಳೆ ಮಾಧ್ಯಮಗಳು ತೊಡೆಯ ಮೇಲೆ ಕುಳಿತರೆ ಸಂವಿಧಾನವೂ ಉಳಿಯುವುದಿಲ್ಲ, ಪ್ರಜಾಪ್ರಭುತ್ವವೂ ಕೂಡಾ" ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಜಾಹಿರಾತು ಮುಕ್ತಾಯಗೊಳ್ಳುತ್ತದೆ.
ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಆಡಳಿತಾರೂಢ ಸರಕಾರದ ಪರ ಹಾಗೂ ವಿರೋಧ ಪಕ್ಷಗಳ ವಿರುದ್ಧ ಚರ್ಚೆಗಳನ್ನು ಹಮ್ಮಿಕೊಳ್ಳುವುದಕ್ಕೆ ಕುಖ್ಯಾತರಾಗಿದ್ದಾರೆ. Newslaundry ಸುದ್ದಿ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ, ಈ ವರ್ಷದ ಫೆಬ್ರವರಿ 1ರಿಂದ ಎಪ್ರಿಲ್ 12ರವರೆಗೆ 137 ಚರ್ಚೆಗಳನ್ನು ನಡೆಸಿರುವ ಅರ್ನಬ್ ಗೋಸ್ವಾಮಿ, ಈ ಪೈಕಿ 73 ಚರ್ಚಾ ಕಾರ್ಯಕ್ರಮಗಳನ್ನು ವಿರೋಧ ಪಕ್ಷಗಳ ವಿರುದ್ಧವೇ ನಡೆಸಿರುವುದು ಬಯಲಾಗಿದೆ. ಅಲ್ಲದೆ 32 ಚರ್ಚೆಗಳನ್ನು ಸರಕಾರದ ಪರವಾಗಿ ನಡೆಸಿರುವುದು ಕಂಡು ಬಂದಿದೆ.
अगर मीडिया गोदी में बैठी रही
— Congress (@INCIndia) May 7, 2024
तो न संविधान रहेगा न लोकतंत्र
हाथ बदलेगा हालात ✋ pic.twitter.com/oWMGMoUGEs