ಹೊಸದಿಲ್ಲಿ | ಪತ್ನಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಮಾಜಿ ಸೈನಿಕ 20 ವರ್ಷದ ಬಳಿಕ ಪೊಲೀಸರ ಬಲೆಗೆ

PC | ndtv
ಹೊಸದಿಲ್ಲಿ: ಪತ್ನಿಯ ಹತ್ಯೆ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿ ಪರೋಲ್ ಅವಧಿಯಲ್ಲಿ ತಪ್ಪಿಸಿಕೊಂಡಿದ್ದ ಭಾರತೀಯ ಸೇನೆಯ ಮಾಜಿ ಸೈನಿಕನೊಬ್ಬನನ್ನು 20 ವರ್ಷದ ಬಳಿಕ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
2005ರಲ್ಲಿ ಪರೋಲ್ ಮೇಲೆ ಬಿಡುಗಡೆಯಾಗಿದ್ದ ಈತ ಆ ಬಳಿಕ ತಲೆ ಮರೆಸಿಕೊಂಡಿದ್ದ. ಆರೋಪಿ ಅನಿಲ್ ಕುಮಾರ್ ತಿವಾರಿ 1989ರಲ್ಲಿ ಪತ್ನಿಯನ್ನು ಜೀವಂತವಾಗಿ ಸುಟ್ಟುಹಾಕಿದ್ದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಈತನನ್ನು 1989ರ ಮೇ 31ರಂದು ಬಂಧಿಸಲಾಗಿತ್ತು. 2005ರ ನವೆಂಬರ್ 21ರಂದು ದೆಹಲಿ ಹೈಕೋರ್ಟ್ ಈತನಿಗೆ ಎರಡು ವಾರಗಳ ಪರೋಲ್ ಮಂಜೂರು ಮಾಡಿತ್ತು. ಆದರೆ ಈತ ಆ ಬಳಿಕ ಸೆರೆಮನೆಗೆ ಹಿಂದಿರುಗಲೇ ಇಲ್ಲ.
ಇಪ್ಪತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೈದಿ ಇತ್ತೀಚೆಗೆ ಪ್ರಯಾಗ್‍ರಾಜ್‍ನಲ್ಲಿ ಮತ್ತು ಆತನ ಗ್ರಾಮದಲ್ಲಿ ತಿರುಗಾಡುತ್ತಿರುವುದನ್ನು ಅಪರಾಧ ವಿಭಾಗದ ಪೊಲೀಸರು ತಾಂತ್ರಿಕ ಮತ್ತು ಮಾನವ ಕಣ್ಗಾವಲು ವ್ಯವಸ್ಥೆಯಿಂದ ತಿಳಿದುಕೊಂಡಿದ್ದರು. ಈ ಮಾಹಿತಿ ಆಧರಿಸಿ, ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಚುರುಹತ್ ಗ್ರಾಮದಲ್ಲಿ ಆತನ ಮನೆಯ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸಲಾಗಿದೆ.
ಪೊಲೀಸರು ತನನ್ನು ಹುಡುಕುತ್ತಿರುವುದು ತಿಳಿದ ತಿವಾರಿ, ಮೊಬೈಲ್ ಬಳಸುತ್ತಿರಲಿಲ್ಲ. ಜತೆಗೆ ತನ್ನ ಅಡಗುದಾಣ ಮತ್ತು ಕೆಲಸದ ಸ್ಥಳವನ್ನು ಪದೇ ಪದೇ ಬದಲಿಸುತ್ತಿದ್ದ. ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ ನಗದು ವ್ಯವಹಾರವನ್ನಷ್ಟೇ ನಡೆಸಿ, ಯಾವುದೇ ಎಲೆಕ್ಟ್ರಾನಿಕ್ ಪುರಾವೆ ಸಿಗದಂತೆ ಎಚ್ಚರ ವಹಿಸಿದ್ದ ಎಂದು ಅಪರಾಧ ವಿಭಾಗದ ಹಿರಿಯ ಅಧಿಕಾರಿ ಆದಿತ್ಯ ಗೌತಮ್ ಹೇಳಿದ್ದಾರೆ.
ಈ ಅವಧಿಯಲ್ಲಿ ಆತ ಮರು ವಿವಾಹವಾಗಿ ನಾಲ್ಕು ಮಕ್ಕಳನ್ನು ಹೊಂದಿದ್ದ. ಸೇನೆಯಲ್ಲಿ ಚಾಲಕನಾಗಿದ್ದ ಈತನನ್ನು 1986ರಲ್ಲಿ ಅಮಾನತು ಮಾಡಲಾಗಿತ್ತು. ಕೋರ್ಟ್ ತೀರ್ಪಿನ ಬಳಿಕ ಸೇನೆಯಿಂದ ವಜಾ ಮಾಡಲಾಗಿತ್ತು.