ಯಾವುದೇ ಶಿಕ್ಷೆಯಾಗಿಲ್ಲ,ಕಾರ್ಯಕರ್ತರ ಬೆಂಬಲವಿಲ್ಲ: ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಶರ್ಜೀಲ್ ಇಮಾಂ
ಹೊಸದಿಲ್ಲಿ: ಐಐಟಿ ಪದವೀಧರ,ಜೆಎನ್ಯುದ ಪಿಎಚ್ಡಿ ವಿದ್ಯಾರ್ಥಿ ಶರ್ಜೀಲ್ ಇಮಾಂ ಜೈಲು ಸೇರಿ ಜ.28ಕ್ಕೆ ಭರ್ತಿ ನಾಲ್ಕು ವರ್ಷಗಳಾಗಿವೆ.
ಅಸ್ಸಾಂ,ಅರುಣಾಚಲ ಪ್ರದೇಶ,ಮಣಿಪುರ,ದಿಲ್ಲಿ ಮತ್ತು ಉತ್ತರ ಪ್ರದೇಶಗಳ ಪೋಲಿಸರು ಸಿಎಎ ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಮಾಡಿದ್ದ ಭಾಷಣಗಳಿಗಾಗಿ ಶರ್ಜೀಲ್ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಿದ ಬಳಿಕ 2020ರಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ದೇಶದ್ರೋಹದ ಮತ್ತು ಬಳಿಕ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿ ಆರೋಪಗಳನ್ನು ಹೊರಿಸಲಾಗಿದೆ. ದಿಲ್ಲಿ ಗಲಭೆಗಳ ‘ವ್ಯಾಪಕ ಪಿತೂರಿ ’ಪ್ರಕರಣದಲ್ಲಿಯೂ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗಿರದಿದ್ದರೂ ಶರ್ಜೀಲ್ ಭರ್ತಿ ನಾಲ್ಕು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಅವರ ವಿರುದ್ಧದ ಐದು ಪ್ರಕರಣಗಳಲ್ಲಿ ಜಾಮೀನು ಲಭಿಸಿದೆ,ಒಂದು ಪ್ರಕರಣದಲ್ಲಿ ಎಂದಿಗೂ ಬಂಧಿಸಲಾಗಿಲ್ಲ ಮತ್ತು ಅವರ ವಿರುದ್ಧದ ಯುಎಪಿಎ ಪ್ರಕರಣಗಳು ಮಾತ್ರ ಉಳಿದುಕೊಂಡಿವೆ.
ಈ ನಾಲ್ಕು ವರ್ಷಗಳಲ್ಲಿ ಶರ್ಜೀಲ್ ಸಲ್ಲಿಸಿರುವ ಜಾಮೀನು ಅರ್ಜಿಗಳು ದಿಲ್ಲಿಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯುಳಿದಿವೆ. ಕಳೆದ ವರ್ಷ ಸಲ್ಲಿಸಿದ್ದ ಅರ್ಜಿಯೂ ಇವುಗಳಲ್ಲಿ ಸೇರಿದ್ದು,ಯುಎಪಿಎ ಅಡಿ ಗರಿಷ್ಠ ಶಿಕ್ಷೆಯ (ಏಳು ವರ್ಷಗಳು) ಅರ್ಧಕ್ಕೂ ಹೆಚ್ಚಿನ ಅವಧಿಯನ್ನು ತಾನು ಪೂರ್ಣಗೊಳಿಸಿರುವುದರಿಂದ ತನಗೆ ತಕ್ಷಣ ಜಾಮೀನು ನೀಡುವಂತೆ ಶರ್ಜೀಲ್ ಕೋರಿಕೊಂಡಿದ್ದರು.
‘‘ಅವನ ಜೀವನದ ನಾಲ್ಕು ವರ್ಷಗಳು ವ್ಯರ್ಥಗೊಂಡಿವೆ. ಅವನು ಹೊರಗಿದ್ದರೆ ಹೆಚ್ಚು ಓದಬಹುದಿತ್ತು,ಹೆಚ್ಚು ಸಂಶೋಧನೆ ಮಾಡಬಹುದಿತ್ತು. ಅವನಿನ್ನೂ ತನ್ನ ಪಿಎಚ್ಡಿಯನ್ನು ಪೂರ್ಣಗೊಳಿಸಬೇಕಿದೆ. ಆದರೆ ಅವನ ಮನೋಬಲ ಕುಂದಿಲ್ಲ. ಅವರು ನಗುತ್ತಲೇ ಇರುತ್ತಾನೆ ಮತ್ತು ‘ಅಮ್ಮಾ,ಎಲ್ಲ ಸರಿಯಾಗುತ್ತದೆ ’ ಎಂದು ನಮ್ಮ ತಾಯಿಗೆ ಭರವಸೆ ನೀಡುತ್ತಿರುತ್ತಾನೆ ’’ಎಂದು thewire.in ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶಾರ್ಜೀಲ್ರ ಕಿರಿಯ ಸೋದರ ಮುಝಮ್ಮಿಲ್ ಹೇಳಿದರು.
‘ಜೈಲಿನಲ್ಲಿರುವ ಯಾವುದೇ ಕೈದಿಯ ಕುಟುಂಬಕ್ಕೆ ಸ್ಥಿರತೆಯ ಭಾವನೆ ಕಳೆದುಹೋಗುತ್ತದೆ. ನಮ್ಮ ತಾಯಿಗೆ ನಾವಿಬ್ಬರೇ ಮಕ್ಕಳು. ಆ ಸ್ಥಿರತೆಯ ಭಾವನೆಯು ಕಳೆದ ಬಳಿಕ ಒಂದು ರೀತಿಯಲ್ಲಿ ನಮ್ಮ ಜೀವನವು ಸ್ಥಗಿತಗೊಂಡಿದೆ ’ ಎಂದರು.
ಬಂಧನವಾದ ನಾಲ್ಕು ವರ್ಷಗಳಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯವು ಶರ್ಜೀಲ್ರ ಜಾಮೀನು ಅರ್ಜಿಯನ್ನು 46 ಸಲ ವಿಚಾರಣೆಗೆ ಪಟ್ಟಿ ಮಾಡಿತ್ತು ಮತ್ತು ಈಗ ದಿಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದಿನ ತಿಂಗಳಿನಿಂದ ಹೊಸದಾಗಿ ನಡೆಸಲು ಸಜ್ಜಾಗಿದೆ. ಮೊದಲ ಎಫ್ಐಆರ್ನಡಿ ಶರ್ಜೀಲ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನೂ ದಿಲ್ಲಿಯ ಕೆಳ ನ್ಯಾಯಾಲಯವು ಮುಂದಿನ ತಿಂಗಳು ಹೊಸದಾಗಿ ಆರಂಭಿಸಲಿದೆ. ಈ ಎಫ್ಐಆರ್ನಡಿ ಶರ್ಜೀಲ್ರನ್ನು ಅವರ ಭಾಷಣಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
‘ಶರ್ಜೀಲ್ ಬಂಧನವಾದಾಗ ಜಾಮೀನು ಸಿಗಲು ಬಹುಶಃ ಎರಡು ವರ್ಷ ಹೋಗಬಹುದು ಎಂದು ನಾವು ಭಾವಿಸಿದ್ದೆವು,ಆದರೆ ಇಷ್ಟೊಂದು ವರ್ಷಗಳ ಕಾಲ ಎಳೆಯುತ್ತದೆ ಎಂದು ನಾವು ಎಣಿಸಿರಲಿಲ್ಲ. ಈಶಾನ್ಯ ದಿಲ್ಲಿ ಗಲಭೆಗಳು ಶರ್ಜೀಲ್ ಬಂಧನದ ಬಳಿಕ ನಡೆದಿದ್ದವು, ಆದರೂ ವಿನಾಕಾರಣ ಆತನನ್ನು ಆ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ ’ಎಂದು ಮುಝಮ್ಮಿಲ್ ಹೇಳಿದರು.
ಯುಎಪಿಎ ಅಡಿ ಪ್ರಕರಣದಲ್ಲಿ ತಕ್ಷಣ ಜಾಮೀನು ಕೋರಿ ಶರ್ಜೀಲ್ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳುಗಳು ಕಳೆದಿವೆ. ಅವರು ಅರ್ಧಕ್ಕೂ ಹೆಚ್ಚಿನ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿರುವುದರಿಂದ ಶಾಸನಬದ್ಧ ಜಾಮೀನಿಗೆ ಅರ್ಹರಾಗಿದ್ದಾರೆ. ಆದರೂ ಅವರಿಗೆ ಈವರೆಗೆ ಜಾಮೀನು ಮಂಜೂರಾಗಿಲ್ಲ. ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಾಧೀಶರು ಕಳೆದ ಡಿಸೆಂಬರ್ನಲ್ಲಿ ವರ್ಗಾವಣೆಗೊಂಡಿದ್ದಾರೆ. ಈಗ ಇನ್ನೋರ್ವ ನ್ಯಾಯಾಧೀಶರ ಎದುರು ಫೆ.7ಕ್ಕೆ ವಿಷಯವನ್ನು ಪಟ್ಟಿ ಮಾಡಲಾಗಿದೆ. ಅವರು ಹೊಸದಾಗಿ ಅದನ್ನು ಪರಿಗಣಿಸಿ ಬಳಿಕ ಆದೇಶವನ್ನು ಹೊರಡಿಸಲಿದ್ದಾರೆ ಎಂದು ಶರ್ಜೀಲ್ ಪರ ವಕೀಲ ಇಬ್ರಾಹಿಂ ಹೇಳಿದರು.
ಶರ್ಜೀಲ್ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ಇತ್ಯರ್ಥಗೊಳಿಸುವಲ್ಲಿ ನ್ಯಾಯಾಂಗದಿಂದ ತುಂಬ ವಿಳಂಬವಾಗಿದೆ. ಇದು ದುರಂತ. ಯಾವುದೇ ಜಾಮೀನು ಅರ್ಜಿಯು ಎರಡು ವರ್ಷಕ್ಕಿಂತ ಹೆಚ್ಚು ಅವಧಿಗೆ ಬಾಕಿಯಾಗಬಾರದು. ಆರೋಪಿಯು ಜಾಮೀನಿಗೆ ಅರ್ಹನಲ್ಲ ಎಂದು ನೀವು ಭಾವಿಸಿದ್ದರೆ ಅರ್ಜಿಯನ್ನು ವಜಾಗೊಳಿಸಿ,ಆಗ ಆರೋಪಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಅಥವಾ ಮೇಲಿನ ನ್ಯಾಯಾಲಯದಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಬಹುದು. ಆದರೆ ಜಾಮೀನು ಅರ್ಜಿಯನ್ನು ಇಷ್ಟೊಂದು ದೀರ್ಘಕಾಲ ಬಾಕಿಯಿರಿಸುವುದು ಕ್ರಿಮಿನಲ್ ನ್ಯಾಯಶಾಸ್ತ್ರದಿಂದ ಎಲ್ಲ ನೀರೀಕ್ಷೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ ಇಬ್ರಾಹಿಂ,ನ್ಯಾಯಾಂಗವು ಸರಕಾರದ ಒತ್ತಡದಡಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಈ ವಿಳಂಬಗಳು ತೋರಿಸುತ್ತಿವೆ ಎಂದರು.
ಉಮರ್ ಖಾಲಿದ್ರಂತಹ ಇತರ ರಾಜಕೀಯ ಕೈದಿಗಳಿಗೆ ಸಿಕ್ಕಿರುವ ನಾಗರಿಕ ಸಮಾಜದ ಗುಂಪುಗಳು ಮತ್ತು ಪ್ರಮುಖ ರಾಜಕೀಯ ಕಾರ್ಯಕರ್ತರ ಬೆಂಬಲ ಶಾರ್ಜೀಲ್ಗೆ ಸಿಕ್ಕಿಲ್ಲ.
ಅವರು ತಾವು ಯಾರನ್ನು ಬೆಂಬಲಿಸಬೇಕು ಮತ್ತು ಯಾರನ್ನು ಬೆಂಬಲಿಸಬಾರದು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಮುಝಮ್ಮಿಲ್ ಹೇಳಿದರು.
‘‘ಒಂದಲ್ಲೊಂದು ದಿನ ಶರ್ಜೀಲ್ ಹೊರಬರುತ್ತಾನೆ ಎಂಬ ಭರವಸೆಯನ್ನು ಇಟ್ಟುಕೊಳ್ಳುವುದನ್ನು ಬಿಟ್ಟರೆ ನಮಗೆ ಬೇರೆ ದಾರಿಯಿಲ್ಲ. ಅಲ್ಲಿಯವರೆಗೆ ಆತನ ಜೀವನದ ಅಮೂಲ್ಯವರ್ಷಗಳು ವ್ಯರ್ಥವಾಗುತ್ತಲೇ ಇರುತ್ತವೆ ಅಷ್ಟೇ. ಅವರು ಆತನ ಜಾಮೀನು ಅರ್ಜಿಗಳನ್ನು ಮುಂದೂಡುತ್ತಲೇ ಹೋಗಬಹುದು,ಆದರೆ ಎಷ್ಟು ವರ್ಷ ಜೈಲಿನಲ್ಲಿ ಇಡುತ್ತಾರೆ?
‘ಹರ್ ಉರೂಜ್ ಕಾ ಝವಾಲ್ ದೇಖ್ನಾ ಹೋತಾ ಹೈ(ಪ್ರತಿ ಏರಿಕೆಯೂ ಒಂದು ಪತನವನ್ನು ನೋಡಬೇಕಾಗುತ್ತದೆ) ’ಎನ್ನುವ ನಾಣ್ಣುಡಿಯಿದೆ ಮತ್ತು ನಮ್ಮ ಹಾಗೂ ಅವರ ಪಾಲಿಗೂ ಇದು ನಿಜವಾಗಲಿದೆ ’’ ಎಂದು ಮುಝಮ್ಮಿಲ್ ಹೇಳಿದರು.