ಆನ್ ಲೈನ್ ನಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದ ಮಹಿಳೆಗೆ ಮಾಂಸಾಹಾರಿ ಬಿರಿಯಾನಿ ಪೂರೈಕೆ; ರೆಸ್ಟೋರೆಂಟ್ ಮಾಲಕನ ಬಂಧನ

Update: 2025-04-08 14:40 IST
ಆನ್ ಲೈನ್ ನಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದ ಮಹಿಳೆಗೆ ಮಾಂಸಾಹಾರಿ ಬಿರಿಯಾನಿ ಪೂರೈಕೆ; ರೆಸ್ಟೋರೆಂಟ್ ಮಾಲಕನ ಬಂಧನ

Photo credit: X/@noidapolice/X

  • whatsapp icon

ನೊಯ್ಡಾ: ಗ್ರಾಹಕಿಯೊಬ್ಬರು ಆನ್ ಲೈನ್ ನಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದರೂ, ಆಕೆಗೆ ಮಾಂಸಾಹಾರಿ ಬಿರಿಯಾನಿ ಪೂರೈಕೆ ಮಾಡಿದ ಆರೋಪದ ಮೇಲೆ ಸೋಮವಾರ ರೆಸ್ಟೋರೆಂಟ್ ಒಂದರ ಮಾಲಕನನ್ನು ನೊಯ್ಡಾ ಪೊಲೀಸರು ಬಂಧಿಸಿದ್ದಾರೆ.

ಈ ಘಟನೆಯು ನವರಾತ್ರಿ ಹಬ್ಬದಂದೇ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಕುರಿತು ರವಿವಾರ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದ ಛಾಯಾ ಶರ್ಮ ಎಂಬ ಮಹಿಳೆ, “ನಾನು ಸ್ವಿಗ್ಗಿ ಆ್ಯಪ್ ಅನ್ನು ಬಳಸಿ, ಗ್ರೇಟರ್ ನೊಯ್ಡಾದಲ್ಲಿರುವ ಲಕ್ನೊವಿ ಕಬಾಬ್ ಪರಾಠ ರೆಸ್ಟೋರೆಂಟ್ ನಲ್ಲಿ ವೆಜ್ ಬಿರಿಯಾನಿಗೆ ಆರ್ಡರ್ ಮಾಡಿದ್ದೆ” ಎಂದು ಹೇಳಿಕೊಂಡಿದ್ದಾರೆ.

ನಾನು ಒಂದೆರಡು ತುತ್ತು ಸೇವಿಸಿದ ನಂತರವಷ್ಟೆ, ನಾನು ಮಾಂಸವನ್ನು ಸೇವಿಸುತ್ತಿದ್ದೇನೆ ಎಂಬ ಸಂಗತಿ ನನಗೆ ಮನವರಿಕೆಯಾಯಿತು ಎಂದೂ ಆಕೆ ತಿಳಿಸಿದ್ದಾರೆ.

“ನಾನು ಶುದ್ಧ ಸಸ್ಯಾಹಾರಿಯಾಗಿದ್ದು, ನವರಾತ್ರಿಯ ವೇಳೆ ಅವರು ನನಗೆ ಮಾಂಸಾಹಾರಿ ಬಿರಿಯಾನಿಯನ್ನು ಪೂರೈಸಿದ್ದಾರೆ” ಎಂದು ಆರೋಪಿಸಿರುವ ಆಕೆ, “ರೆಸ್ಟೋರೆಂಟ್ ಈ ಕೃತ್ಯವನ್ನು ಉದ್ದೇಶಪೂರ್ವಕವಾಗಿಯೇ ಮಾಡಿದೆ” ಎಂದೂ ದೂರಿದ್ದಾರೆ. ಆಕೆಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸೋಮವಾರ ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ನೊಯ್ಡಾದ ಉಪ ಪೊಲೀಸ್ ಆಯುಕ್ತ ಶಕ್ತಿ ಮೋಹನ್ ಅವಸ್ಥಿ, ವಿಡಿಯೊವನ್ನು ಆಧರಿಸಿ ನಾವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

“ಎಪ್ರಿಲ್ 7, 2025ರಂದು ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ಮಹಿಳೆಯರೊಬ್ಬರು ತಾನು ಆಹಾರ ಪೂರೈಕೆ ಆ್ಯಪ್ ಬಳಸಿಕೊಂಡು ವೆಜ್ ಬಿರಿಯಾನಿಗೆ ಆರ್ಡರ್ ಮಾಡಿದ್ದರೂ, ನನಗೆ ಮಾಂಸಾಹಾರಿ ಬಿರಿಯಾನಿಯನ್ನು ಪೂರೈಸಲಾಗಿತ್ತು ಎಂದು ಆರೋಪಿಸಿದ್ದರು” ಎಂದು ಅವರು ಹೇಳಿದ್ದಾರೆ.

“ಈ ಸಂಬಂಧ ಬಿಸ್ರಖ್ ಠಾಣೆಯ ಪೊಲೀಸರು ರೆಸ್ಟೋರೆಂಟ್ ನ ಉದ್ಯೋಗಿಯೊಬ್ಬನನ್ನು ವಶಕ್ಕೆ ಪಡೆದಿದ್ದು, ಈ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ” ಎಂದೂ ಅವರು ತಿಳಿಸಿದ್ದಾರೆ.

ಇದಾದ ನಂತರ, ಸೋಮವಾರದಂದು ರಾಹುಲ್ ರಾಜ್ಯವಂಶಿ ಎಂಬ ಹೆಸರಿನ ರೆಸ್ಟೋರೆಂಟ್ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಗೌತಮ್ ಬುದ್ಧ್ ನಗರದಲ್ಲಿನ ಪೊಲೀಸ್ ಕಮಿಷನರೇಟ್ ಕಚೇರಿಯು, “ವೆಜ್ ಬಿರಿಯಾನಿಗಾಗಿ ಮಾಡಲಾಗಿದ್ದ ಆನ್ ಲೈನ್ ಆರ್ಡರ್ ಗೆ ಬದಲಿಯಾಗಿ ಮಾಂಸಾಹಾರಿ ಬಿರಿಯಾನಿಯನ್ನು ಪೂರೈಸಿದ ಆರೋಪದ ಮೇಲೆ ಬಿಸ್ರಖ್ ಠಾಣೆ ಪೊಲೀಸರು ರೆಸ್ಟೋರೆಂಟ್ ಒಂದರ ನಿರ್ವಾಹಕನನ್ನು ಬಂಧಿಸಿದ್ದಾರೆ” ಎಂದು ಹೇಳಿದೆ.

ಆದರೆ, ಈ ವಿಷಯದ ಕುರಿತು ಪೊಲೀಸರು ಈವರೆಗೆ ಯಾವುದೇ ಎಫ್ಐಆರ್ ಅನ್ನು ದಾಖಲಿಸಿಕೊಂಡಿಲ್ಲ ಹಾಗೂ ಈ ಘಟನೆಯ ಕುರಿತು ಸದರಿ ಮಹಿಳೆಯು ಇನ್ನಷ್ಟೆ ತನ್ನ ಹೇಳಿಕೆಯನ್ನು ದಾಖಲಿಸಬೇಕಿದೆ ಎಂದು The Print ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News