"ನಾವು ಮಧ್ಯಪ್ರವೇಶಿಸುವುದಿಲ್ಲ, ಹೈಕೋರ್ಟಿಗೆ ತೆರಳಿ": ಹೇಮಂತ್ ಸೊರೇನ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಹೊಸ ದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ ಕ್ರಮವನ್ನು ಪ್ರಶ್ನಿಸಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
“ನಾವು ಮಧ್ಯಪ್ರವೇಶಿಸುವುದಿಲ್ಲ. ಹೈಕೋರ್ಟಿಗೆ ತೆರಳಿ” ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಕಳೆದ ಬುಧವಾರ ತಡರಾತ್ರಿ ಹೇಮಂತ್ ಸೊರೇನ್ ಅವರನ್ನು ಬಂಧಿಸಿ, ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು. ಇಂದು ಜಾರಿ ನಿರ್ದೇಶನಾಲಯವು ನಿರ್ದಿಷ್ಟವಾಗಿ 10 ದಿನಗಳ ಕಾಲ ಆರೋಪಿಯನ್ನು ತನ್ನ ವಶಕ್ಕೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆ ಇದೆ.
ಜಾರಿ ನಿರ್ದೇಶನಾಲಯವು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದು, ಪ್ರಜಾತಾಂತ್ರಿಕವಾಗಿ ಆಯ್ಕೆಗೊಂಡಿರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ದುರದ್ದೇಶಪೂರಿತ ರೀತಿಯಲ್ಲಿ ವರ್ತಿಸಿದೆ ಎಂದು ಸುಪ್ರೀಂ ಕೋರ್ಟ್ ಎದುರು ಸಲ್ಲಿಸಿದ್ದ ತಮ್ಮ ಅರ್ಜಿಯಲ್ಲಿ ಹೇಮಂತ್ ಸೊರೇನ್ ವಾದಿಸಿದ್ದರು.
ತಮ್ಮ ಬಂಧನವು ಕಾನೂನುಬಾಹಿರ ಮತ್ತು ವ್ಯಾಪ್ತಿ ಮೀರಿದ್ದು ಎಂದೂ ಕೂಡಾ ಆರೋಪಿಸಿದ್ದ ಅವರು, ಜಾರಿ ನಿರ್ದೇಶನಾಲಯವು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನಿರ್ಲಜ್ಜವಾಗಿ ವರ್ತಿಸುತ್ತಿದೆ ಹಾಗೂ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಅರ್ಜಿದಾರನಾದ ನನ್ನ ಸರ್ಕಾರವನ್ನು ಅಸ್ಥಿರಗೊಳಿಸಲು ನನ್ನನ್ನು ಬೇಟೆಯಾಡಲಾಗುತ್ತಿದೆ” ಎಂದು ಹೇಮಂತ್ ಸೊರೇನ್ ದೂರಿದ್ದರು.
ಈ ನಡುವೆ, ಜೆಎಂಎಂ ಪಕ್ಷದ ಹಿರಿಯ ನಾಯಕ ಚಂಪೈ ಸೊರೇನ್ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.