ಪೋಸ್ಟ್‌ಗಳನ್ನು ಲೈಕ್ ಮಾಡಿದ್ದಕ್ಕಾಗಿ ಮುಂಬೈನ ಶಾಲಾ ಪ್ರಾಂಶುಪಾಲರ ರಾಜೀನಾಮೆಗೆ ಸೂಚನೆ

Update: 2024-05-02 16:40 GMT

ಪರ್ವೀನ್ ಶೇಖ್ | PC : Parveen Shaikh/LinkedIn

ಮುಂಬೈ: ಸರಣಿ ಪೋಸ್ಟ್‌ಗಳನ್ನು ಲೈಕ್ ಮಾಡಿದ್ದಕ್ಕಾಗಿ ಹುದ್ದೆಗೆ ರಾಜೀನಾಮೆ ಸಲ್ಲಿಸುವಂತೆ ತನಗೆ ಸೂಚಿಸಲಾಗಿದೆ ಎಂದು ಇಲ್ಲಿಯ ವಿದ್ಯಾವಿಹಾರದ ಸೋಮೈಯಾ ಶಾಲೆಯ ಸ್ಥಾಪಕ ಪ್ರಾಂಶುಪಾಲರಾದ ಪರ್ವೀನ್ ಶೇಖ್ ತಿಳಿಸಿದ್ದಾರೆ.

ಎ.24ರಂದು ಹಿಂದುತ್ವ ಪೋರ್ಟಲ್‌ವೊಂದು ಶೇಖ್ ಅವರ ‘ಆತಂಕಕಾರಿ ಸಾಮಾಜಿಕ ಮಾಧ್ಯಮ ನಡವಳಿಕೆ’ಯನ್ನು ಬಹಿರಂಗಗೊಳಿಸಿದ್ದಾಗಿ ಹೇಳಿಕೊಂಡು ಲೇಖನವನ್ನು ಪ್ರಕಟಿಸಿತ್ತು. ಶೇಖ್ ತನ್ನ ಎಕ್ಸ್ ಖಾತೆಯಿಂದ ‘ಲೈಕ್ ’ಮಾಡಿದ್ದ ಪೋಸ್ಟ್‌ಗಳನ್ನು ಆಧರಿಸಿ ಅವರನ್ನು ಹಮಾಸ್ ಪರ ಸಹಾನುಭೂತಿಯನ್ನು ಹೊಂದಿರುವವರು, ಹಿಂದು ವಿರೋಧಿ ಮತ್ತು ಇಸ್ಲಾಮಿಸ್ಟ್ ಉಮರ್ ಖಾಲಿದ್ ಬೆಂಬಲಿಗರು ಎಂದು ಲೇಖನವು ಆರೋಪಿಸಿತ್ತು.

ಶಾಲೆಯ ಆಡಳಿತ ಮಂಡಳಿಯು ಶೇಖ್ ಅವರನ್ನು ಕರೆಸಿಕೊಂಡು ವಿವರಣೆಯನ್ನು ಕೇಳಿತ್ತು. ಆ ಪೋಸ್ಟ್‌ಗಳನ್ನು ತಾನು ಲೈಕ್ ಮಾಡಿದ್ದನ್ನು ಶೇಖ್ ಒಪ್ಪಿಕೊಂಡಿದ್ದರು.

‘ಟ್ವೀಟ್‌ಗಳು, ಲೈಕ್‌ಗಳು ಮತ್ತು ಪ್ರತಿಕ್ರಿಯೆಗಳು ಸೇರಿದಂತೆ ನನ್ನ ಸಾಮಾಜಿಕ ಮಾಧ್ಯಮ ಸಂವಾದಗಳು ಜಾತ್ಯತೀತತೆ ಮತ್ತು ವಾಕ್ ಸ್ವಾತಂತ್ರ್ಯ ಕುರಿತು ನಮ್ಮ ದೇಶದ ಸಂವಿಧಾನದ ತತ್ವಗಳಿಗೆ ಅನುಗುಣವಾಗಿವೆ ಮತ್ತು ಅವು ಫೆಲೆಸ್ತೀನಿಯರ ಹೋರಾಟಕ್ಕೆ ಭಾರತದ ದೀರ್ಘಕಾಲಿಕ ಬೆಂಬಲವನ್ನು ಪ್ರತಿಫಲಿಸುತ್ತವೆ. ನನ್ನ ವಿರುದ್ಧ ಆರೋಪಗಳನ್ನು ಮಾಡಿರುವ ಹಿಂದುತ್ವ ವೇದಿಕೆ ಮತ್ತು ಅದರ ಸಂಯೋಜಿತ ಘಟಕಗಳು ಈ ಸಾಂವಿಧಾನಿಕ ಮೌಲ್ಯಗಳ ವಿರುದ್ಧ ಪೂರ್ವಾಗ್ರಹಗಳನ್ನು ಹೊಂದಿರಬಹುದು ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಇದು ತಮ್ಮ ತಾರತಮ್ಯದ ಅಜೆಂಡಾವನ್ನು ಮುಂದುವರಿಸುವ ನಿಟ್ಟಿನಲ್ಲಿ ಅವರ ದುರುದ್ದೇಶಪೂರಿತ ಪ್ರತಿಕ್ರಿಯೆಯಾಗಿದೆ ಎಂದು ಶೇಖ್ ಸುದ್ದಿಸಂಸ್ಥೆಗೆ ತಿಳಿಸಿದರು.




 


ಲೇಖನದ ಕಾರಣದಿಂದಾಗಿ ರಾಜೀನಾಮೆ ನೀಡುವಂತೆ ಶೇಖ್ ಅವರಿಗೆ ಸೂಚಿಸಲಾಗಿದೆ ಎನ್ನುವುದನ್ನು ಸೋಮೈಯಾ ಶಾಲೆಯ ವಕ್ತಾರರು ದೃಢಪಡಿಸಲಿಲ್ಲ ಅಥವಾ ನಿರಾಕರಿಸಲೂ ಇಲ್ಲ. ನಾವು ವಿಷಯವನ್ನು ಪರಿಶೀಲಿಸುತ್ತಿದ್ದೇವೆ ಎಂದಷ್ಟೇ ಅವರು ಹೇಳಿದರು.

ಶೇಖ್ 12 ವರ್ಷಗಳಿಂದಲೂ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಏಳು ವರ್ಷಗಳಿಂದ ಶಾಲೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News