ಗಂಭೀರ್ ನನ್ನನ್ನು ಫಿಕ್ಸರ್ ಎಂದರು ಎಂದು ಆರೋಪಿಸಿ ಪೋಸ್ಟ್ ಮಾಡಿದ ಶ್ರೀಶಾಂತ್‌ ಗೆ ನೋಟಿಸ್

Update: 2023-12-08 16:17 GMT

ಗೌತಮ್ ಗಂಭೀರ್ , ಎಸ್ ಶ್ರೀಶಾಂತ್ | Photo :  X

ಹೊಸದಿಲ್ಲಿ: ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜಯಂಟ್ಸ್ ನಡುವಿನ ಎಲ್ಎಲ್ಸಿ ಪಂದ್ಯದ ನಂತರ ಗೌತಮ್ ಗಂಭೀರ್ ತಮ್ಮನ್ನು “ಫಿಕ್ಸರ್” ಎಂದು ಹೀಗಳೆರೆದರು ಎಂದು ಹೇಳಿಕೊಂಡು ಕ್ರಿಕೆಟಿಗ ಎಸ್ ಶ್ರೀಶಾಂತ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವುದು ವಿವಾದಕ್ಕೀಡಾಗಿದ್ದು ಅವರಿಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಕಮಿಷನರ್ ಈಗಾಗಲೇ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.

ಮೈದಾನದಲ್ಲಿ ಗಂಭೀರ್ ಮತ್ತು ಶ್ರೀಶಾಂತ್ ನಡುವೆ ನಡೆದಿತ್ತೆನ್ನಲಾದ ಮಾತಿನ ಜಟಾಪಟಿಯ ಕುರಿತು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಶ್ರೀಶಾಂತ್, ತಮ್ಮನ್ನು ಗೌತಮ್ ಗಂಭೀರ್ “ಫಿಕ್ಸರ್” ಎಂದು ಕರೆದಿದ್ದಾರೆಂದು ಹೇಳಿದರು. ಇದು ಒಪ್ಪಂದ ನಿಯಮಗಳ ಉಲ್ಲಂಘನೆ ಎಂದು ಹೇಳಿ ಈಗ ಎಲ್ಎಲ್ಸಿ ಕಮಿಷನರ್ ಅವರು ಶ್ರೀಶಾಂತ್‌ಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಶ್ರೀಶಾಂತ್ ಈ ಘಟನೆಗೆ ಸಂಬಂಧಿಸಿದ ಎಲ್ಲಾ ವೀಡಿಯೋಗಳನ್ನು ಅಳಿಸುವ ತನಕ ಅವರ ಜೊತೆ ಯಾವುದೇ ಮಾತುಕತೆ ಇರುವುದಿಲ್ಲ ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ. ಮೈದಾನದಲ್ಲಿ ಗಂಭೀರ್ ಅವರು ಯಾವುದೇ ನಿಂದನಾತ್ಮಕ ಪದ ಬಳಸಿದ್ದಾರೆಂಬ ಕುರಿತು ಅಲ್ಲಿದ್ದ ಅಂಪೈರ್ಗಳೂ ವರದಿ ಮಾಡಿಲ್ಲ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.

ಗಂಭೀರ್ ಕುರಿತು ಶ್ರೀಶಾಂತ್ ಹೀಗೆ ಬರೆದುಕೊಂಡಿದ್ದಾರೆ- “ನೀವು ಕ್ರೀಡಾಳು ಮತ್ತು ಸಹೋದರನ ಎಲ್ಲೆಯನ್ನು ಮೀರಿದ್ದೀರಿ. ಎಲ್ಲಕ್ಕಿಂತ ಹೆಚ್ಚಾಗಿ ನೀವು ಜನರನ್ನು ಪ್ರತಿನಿಧಿಸುತ್ತೀರಿ. ಆದರೂ ನೀವು ಪ್ರತಿಯೊಬ್ಬ ಕ್ರಿಕೆಟಿಗನೊಂದಿಗೆ ಸಂಘರ್ಷಕ್ಕಿಳಿಯುತ್ತೀರಿ. ನಿಮಗೇನಾಗಿದೆ? ನಾನು ಕೇವಲ ನಕ್ಕು ಗಮನಿಸುತ್ತಿದ್ದೆ, ಆದರೆ ನೀವು ನನ್ನನ್ನು ಫಿಕ್ಸರ್ ಎಂದಿರಿ. ನೀವು ಸುಪ್ರೀಂ ಕೋರ್ಟಿಗಿಂತ ಮಿಗಿಲಾಗಿದ್ದೀರಾ? ಹೀಗೆ ಮಾತನಾಡಲು ನಿಮಗೆ ಅಧಿಕಾರವಿಲ್ಲ. ನೀವು ಅಂಪೈರ್ಗಳನ್ನೂ ನಿಂದಿಸಿದ್ದೀರಿ ಮತ್ತು ನಗುತ್ತೀರಿ. ನೀವು ಅಹಂಕಾರಿ ಮತ್ತು ನಿಮ್ಮನ್ನು ಬೆಂಬಲಿಸಿದವರಿಗೆ ಗೌರವ ಹೊಂದಿಲ್ಲ. ನಿನ್ನೆ ತನಕ ನಾನು ನಿಮ್ಮ ಮೇಲೆ ಮತ್ತು ನಿಮ್ಮ ಕುಟುಂಬದ ಮೇಲೆ ಗೌರವ ಹೊಂದಿದ್ದೆ,”ಎಂದು ಬರೆದಿದ್ದಾರೆ.

ಗೌತಮ್ ಗಂಭೀರ್ ಮಾತ್ರ ಇನ್ಸ್ಟಾಗ್ರಾಂನಲ್ಲಿ “ನಕ್ಕು ಬಿಡಿ, ಜಗತ್ತು ಗಮನ ಸೆಳೆಯುವುದರ ವಿಚಾರ ಆಗಿದೆ,” ಎಂದಷ್ಟೇ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News