ಬುಡಕಟ್ಟು ಮಹಿಳೆಯರ ಮೇಲೆ ಹಲ್ಲೆ, ಚರ್ಚ್‌ ನಲ್ಲಿ ದಾಂಧಲೆ; ಒಡಿಶಾ ಪೊಲೀಸರ ವಿರುದ್ಧ ಗಂಭೀರ ದುಷ್ಕೃತ್ಯದ ಆರೋಪ ಹೊರಿಸಿದ ಸತ್ಯಶೋಧನಾ ತಂಡದ ವರದಿ

Update: 2025-04-15 16:29 IST
ಬುಡಕಟ್ಟು ಮಹಿಳೆಯರ ಮೇಲೆ ಹಲ್ಲೆ, ಚರ್ಚ್‌ ನಲ್ಲಿ ದಾಂಧಲೆ; ಒಡಿಶಾ ಪೊಲೀಸರ ವಿರುದ್ಧ ಗಂಭೀರ ದುಷ್ಕೃತ್ಯದ ಆರೋಪ ಹೊರಿಸಿದ ಸತ್ಯಶೋಧನಾ ತಂಡದ ವರದಿ

ಸಾಂದರ್ಭಿಕ ಚಿತ್ರ 

  • whatsapp icon

ಗಜಪತಿ: ಮಾರ್ಚ್ ಅಂತ್ಯದಲ್ಲಿ ಗಜಪತಿ ಜಿಲ್ಲೆಯ ಮೋಹನ ತಹಸಿಲ್‌ನ ಜುಬಾ ಗ್ರಾಮದಲ್ಲಿ ನಡೆದ ದಾಳಿಯ ಸಮಯದಲ್ಲಿ ಚರ್ಚ್ ʼಅಪವಿತ್ರʼಗೊಳಿಸುವುದು, ಬುಡಕಟ್ಟು ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಮೇಲೆ ಹಲ್ಲೆ ಮತ್ತು ಆಸ್ತಿ ನಾಶ ಸೇರಿದಂತೆ ಒಡಿಶಾ ಪೊಲೀಸರು ಹಲವು ಗಂಭೀರ ದುಷ್ಕೃತ್ಯ ಎಸಗಿದ್ದಾರೆ ಎಂದು ಏಳು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡ ಸತ್ಯಶೋಧನಾ ತಂಡವು ಆರೋಪ ಮಾಡಿದೆ ಎಂದು thewire.in ವರದಿ ಮಾಡಿದೆ.

ವಾರಂಟ್ ಇಲ್ಲದೆ ಚರ್ಚ್ ಆವರಣಕ್ಕೆ ಪ್ರವೇಶಿಸಿದ ಪೊಲೀಸ್ ಸಿಬ್ಬಂದಿ, ರವಿವಾರದ ಸಾಮೂಹಿಕ ಸಿದ್ಧತೆಗಳನ್ನು ನಡೆಸುತ್ತಿದ್ದ ಆದಿವಾಸಿ ಮಹಿಳೆಯರು ಮತ್ತು ಮಕ್ಕಳಿಗೆ ಅಡ್ಡಿಪಡಿಸಿದ್ದು, ಚರ್ಚ್ ಆಸ್ತಿಯನ್ನು ಧ್ವಂಸಗೊಳಿಸಿದರು ಎಂದು ವರದಿ ಮಾಡಿದೆ. ಇದು ರಾಜ್ಯದಲ್ಲಿ ಕ್ರಿಶ್ಚಿಯನ್ ಚರ್ಚ್ ಮೇಲೆ ನಡೆದ ಮೊದಲ ದಾಖಲಿತ ಪೊಲೀಸ್ ದಾಳಿ ಎಂದು ತಂಡ ಹೇಳಿಕೊಂಡಿದೆ.

ಈ ಘಟನೆ ಮಾರ್ಚ್ 22 ರಂದು ನಡೆದಿದ್ದು, ಗಾಂಜಾ ಕೃಷಿಗೆ ಸಂಬಂಧಿಸಿದ ದಾಳಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ.

ತಂಡದ ಪ್ರಕಾರ, ಇಬ್ಬರು ಬುಡಕಟ್ಟು ಬಾಲಕಿಯರ ಮೇಲೆ ಚರ್ಚ್ ಒಳಗೆ ಹಲ್ಲೆ ನಡೆಸಿದ ಪೊಲೀಸರು ಅವರನ್ನು ಪೊಲೀಸ್ ವಾಹನಕ್ಕೆ ಎಳೆದೊಯ್ದರು. ಮಧ್ಯಪ್ರವೇಶಿಸಿದ ಸಬರ್ ಬುಡಕಟ್ಟು ಮಹಿಳೆಯನ್ನು ಥಳಿಸಿ ಆಕೆಯ ಬಟ್ಟೆಗಳನ್ನು ಹರಿದು ಹಾಕಲಾಯಿತು ಎಂದು ಸತ್ಯಶೋಧನಾ ತಂಡವು ಹೇಳಿದೆ.

ಹತ್ತಿರದ ಹಳ್ಳಿಗಳಿಂದ ಮಹಿಳೆಯರು ಮತ್ತು ಮಕ್ಕಳನ್ನು ಕರೆದೊಯ್ದು ದೂರದಲ್ಲಿ ಬಿಟ್ಟು ಹೋಗುವುದು, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಮರಳಿ ನೀಡದೆ ಇರುವುದು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಕಾನೂನು ಉಲ್ಲಂಘನೆಯ ಕೃತ್ಯಗಳನ್ನು ಪೊಲೀಸರು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇಬ್ಬರು ಕ್ಯಾಥೋಲಿಕ್ ಪಾದ್ರಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಅಕ್ರಮ ಧಾರ್ಮಿಕ ಮತಾಂತರದ ಆರೋಪ ಹೊರಿಸಲಾಗಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿ ಹೇಳಿದೆ. ಅದು ಮಾತ್ರವಲ್ಲದೆ, ಅವರ ನಿವಾಸದಿಂದ ರೂ. 40,000 ದೋಚಲಾಗಿದೆ ಎಂದು ಆರೋಪಿಸಲಾಗಿದೆ. ಹಲವಾರು ಮನೆಗಳನ್ನು ದೋಚಲಾಗಿದ್ದು, ಹಾನಿಗೊಳಗಾದ ಮೋಟಾರ್ ಸೈಕಲ್‌ಗಳು, ಗೃಹೋಪಯೋಗಿ ವಸ್ತುಗಳು ಮತ್ತು ಆಹಾರ ಸಾಮಗ್ರಿಗಳ ಕುರಿತು ವರದಿ ಉಲ್ಲೇಖಿಸಿದೆ.

ಪ್ರಕರಣದ ಗಂಭೀರತೆಯ ಹೊರತಾಗಿಯೂ, ಘಟನೆ ನಡೆದು 20 ದಿನಗಳ ನಂತರವೂ ಯಾವುದೇ ಎಫ್‌ಐಆರ್ (FIR) ದಾಖಲಾಗಿಲ್ಲ. ಪೊಲೀಸ್ ವರಿಷ್ಠಾಧಿಕಾರಿಗೆ ದೂರುಗಳನ್ನು ಸಲ್ಲಿಸಲಾಗಿದೆ, ಆದರೆ ಯಾವುದೇ ಔಪಚಾರಿಕ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿ ಹೇಳಿದೆ.

ಪೊಲೀಸ್ ಪಡೆಯೊಳಗಿನ ಕೋಮು ಮತ್ತು ಜಾತಿ ಆಧಾರಿತ ಪಕ್ಷಪಾತವೇ ಹಿಂಸಾಚಾರಕ್ಕೆ ಕಾರಣ ಎಂದು ತಂಡವು ಹೇಳಿದ್ದು, ಆರೋಪಿ ಪೊಲೀಸರ ಮೇಲೆ SC/ST (ದೌರ್ಜನ್ಯ ತಡೆ) ಕಾಯ್ದೆ, POCSO ಕಾಯ್ದೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಕರೆ ನೀಡಿದೆ.

ಪೊಲೀಸ್ ನೇಮಕಾತಿಯನ್ನು ವೈವಿಧ್ಯಗೊಳಿಸುವುದು, ಕಡ್ಡಾಯ ಮಾನವ ಹಕ್ಕುಗಳ ತರಬೇತಿ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮೇಲೆ ಪರಿಣಾಮ ಬೀರುವ ಕಾನೂನು ಉಲ್ಲಂಘನೆಗಳ ಕುರಿತು ಮಾಧ್ಯಮಗಳ ಗಮನವನ್ನು ಹೆಚ್ಚಿಸಬೇಕೆಂದು ಸತ್ಯಶೋಧನಾ ವರದಿ ಸಿದ್ಧಪಡಿಸಿದ ತಂಡವು ಶಿಫಾರಸು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News