ಒಡಿಶಾ | ಅತ್ಯಾಚಾರ ಆರೋಪಿಗೆ ಜಾಮೀನು ; ಸಂತ್ರಸ್ತೆಯನ್ನು ಹತ್ಯೆಗೈದು, ಕತ್ತರಿಸಿ ಎಸೆದ ಆರೋಪಿ

Update: 2024-12-11 16:24 GMT

ಸಾಂದರ್ಭಿಕ ಚಿತ್ರ

ರೂರ್ಕೆಲಾ : ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಆರೋಪಿಯೋರ್ವ ಸಂತ್ರಸ್ತೆಯನ್ನು ಅಪಹರಿಸಿ ಹತ್ಯೆಗೈದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹಲವು ಕಡೆ ಎಸೆದಿರುವ ಆಘಾತಕಾರಿ ಘಟನೆ ಒಡಿಶಾದ ರೂರ್ಕೆಲಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿನ ಮೂಲಕ ಹೊರಬಂದಿದ್ದ ಆರೋಪಿ ಕುನು ಕಿಸನ್ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಪ್ರಾಪ್ತ ಬಾಲಕಿಯನ್ನು ಹತ್ಯೆಗೈದು, ತುಂಡು ತುಂಡಾಗಿ ಕತ್ತರಿಸಿ ಎಸೆದಿದ್ದಾನೆ ಎಂದು ಹೇಳಲಾಗಿದೆ.

ಒಡಿಆರ್‌ಎಫ್ ಸಿಬ್ಬಂದಿಯ ನೆರವಿನಿಂದ ಝರ್ಸುಗುಡಾ ಪೊಲೀಸರ ಉಪಸ್ಥಿತಿಯಲ್ಲಿ ರೂರ್ಕೆಲಾ ಪೊಲೀಸರು ಬಾಲಕಿಯ ಮುಂಡ ಹಾಗೂ ದೇಹ ಭಾಗಗಳನ್ನು ಎರಡನೇ ಬ್ರಾಹ್ಮಿನಿ ಸೇತುವೆಯ ಸಮೀಪದ ನದಿಯಲ್ಲಿ ಪತ್ತೆ ಹಚ್ಚಿದ್ದಾರೆ. ಇತರ ಸಣ್ಣ ಭಾಗಗಳನ್ನು ತರ್ಕೇರಾ ಪಂಪ್ ಹೌಸ್‌ನ ಸಮೀಪದ ಜೌಗು ಪೊದೆಗಳಲ್ಲಿ ಪತ್ತೆಹಚ್ಚಿದ್ದಾರೆ.

ಅಪ್ರಾಪ್ತ ಬಾಲಕಿಯನ್ನು ಕುನು ಕಿಸನ್ 2023 ಆಗಸ್ಟ್‌ನಲ್ಲಿ ಅತ್ಯಾಚಾರ ಎಸಗಿದ್ದ. ಈ ಆರೋಪದಲ್ಲಿ ಆತನ ವಿರುದ್ಧ ಧುರುಧಿಹಿ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸ್ ಡಿಐಜಿ (ಪಶ್ಚಿಮ ವಲಯ) ಬ್ರಿಜೇಶ್ ಕುಮಾರ್ ರಾಯ್ ಹೇಳಿದ್ದಾರೆ.

ಸಂತ್ರಸ್ತೆ ಬಾಲಕಿ ಝರ್ಸುಗುಡದಲ್ಲಿರುವ ತನ್ನ ಅತ್ತೆಯೊಂದಿಗೆ ವಾಸಿಸುತ್ತಿದ್ದಳು. ಬೆಹೆರಾಮಲ್‌ನ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಡಿಸೆಂಬರ್ 7ರಂದು ನಾಪತ್ತೆಯಾಗಿದ್ದಳು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News