ರಾಜ್ಯ ಸ್ಥಾನಮಾನ ಮರಳಿಕೆಗೆ ಪ್ರಧಾನಿಗೆ ಉಮರ್ ಅಬ್ದಲ್ಲಾ ಮನವಿ

Update: 2025-01-13 15:38 GMT

ಉಮರ್ ಅಬ್ದುಲ್ಲಾ  | PC : PTI 

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಸುವ ತನ್ನ ಭರವಸೆಯನ್ನು ಈಡೇರಿಸಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಸೋಮವಾರ ಶ್ಲಾಘಿಸಿದ್ದಾರೆ.

ಝಡ್-ಮೋರ್ ಸುರಂಗ ಮಾರ್ಗದ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಉಮರ್, ‘‘ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ, ಪ್ರಧಾನಿ ಮೋದಿ ಶ್ರೀನಗರದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಲಾಗುವುದು ಮತ್ತು ನಿಮ್ಮದೇ ಸರಕಾರವನ್ನು ಆರಿಸುವ ಅವಕಾಶವನ್ನು ಒದಗಿಸಲಾಗುವುದು ಎಂಬ ಭರವಸೆಯನ್ನು ಜನರಿಗೆ ನೀಡಿದ್ದರು. ನೀವು ನಿಮ್ಮ ಭರವಸೆಯನ್ನು ಈಡೇರಿಸಿದ್ದೀರಿ. ಅದಾದ ನಾಲ್ಕೇ ತಿಂಗಳುಗಳಲ್ಲಿ ಚುನಾವಣೆ ನಡೆಸಲಗಿದೆ. ಹೊಸ ಸರಕಾರವನ್ನು ಆರಿಸಲಾಗಿದೆ. ಅದರ ಫಲಿತಾಂಶವಾಗಿ ಮುಖ್ಯಮಂತ್ರಿಯಾಗಿ ಇಂದು ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ’’ ಎಂದು ಹೇಳಿದರು.

‘‘ಜನರು ಚುನಾವಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಚುನಾವಣೆಯಲ್ಲಿ ಅಕ್ರಮ ನಡೆದ ಬಗ್ಗೆ ಅಥವಾ ಅಧಿಕಾರ ದುರುಪಯೋಗದ ಬಗ್ಗೆ ಯಾವುದೇ ದೂರು ಇರಲಿಲ್ಲ’’ ಎಂದು ಅವರು ನುಡಿದರು.

‘‘ಪ್ರಧಾನಿಯವರೇ, ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರಳಿಸುವ ಭರವಸೆಯನ್ನೂ ನೀವು ನೀಡಿದ್ದೀರಿ. ಈ ವಿಷಯದಲ್ಲಿ ಜನರು ನನ್ನನ್ನು ಕೇಳುತ್ತಿರುತ್ತಾರೆ. ಚುನಾವಣೆ ನಡೆಸುವ ತನ್ನ ಭರವಸೆಯನ್ನು ಪ್ರಧಾನಿ ಮೋದಿ ಈಡೇರಿಸಿದ್ದಾರೆ ಎಂಬುದನ್ನು ನಾನು ಅವರಿಗೆ ನೆನಪಿಸುತ್ತಿದ್ದೇನೆ. ಈ ಭರವಸೆಯೂ ಶೀಘ್ರವಾಗಿ ಈಡೇರುವುದು ಮತ್ತು ಜಮ್ಮು ಮತ್ತು ಕಾಶ್ಮೀರವು ಮತ್ತೊಮ್ಮೆ ಈ ದೇಶದ ರಾಜ್ಯವಾಗುವುದು ಎಂದು ನಾನು ಭಾವಿಸುತ್ತೇನೆ’’ ಎಂದು ಮುಖ್ಯಮಂತ್ರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News