ಧೈರ್ಯ ತುಂಬುವ ಯತ್ನವೆಂದರೆ ಒಂದು ಸಮುದಾಯದ ಕಟ್ಟಡಗಳನ್ನು ನೆಲಸಮಗೊಳಿಸುವುದೇ?: ಬುಲ್ಡೋಜರ್‌ ಕಾರ್ಯಾಚರಣೆ ಬಗ್ಗೆ ಉವೈಸಿ ಟೀಕೆ

Update: 2023-08-07 09:26 GMT

ಅಸದುದ್ದೀನ್‌ ಉವೈಸಿ (PTI)

ಹೊಸದಿಲ್ಲಿ: ನೂಹ್‌ ಗಲಭೆಗಳ ನಂತರ ಬುಲ್ಡೋಜರ್‌ ಕಾರ್ಯಾಚರಣೆಗೆ ಆದೇಶಿಸಿ ನ್ಯಾಯಾಲಯಗಳ ಹಕ್ಕುಗಳನ್ನು ಹರ್ಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಸೆಳೆದಿದ್ದಾರೆಂದು ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್‌ ಉವೈಸಿ ಆರೋಪಿಸಿದ್ದಾರೆ. ಈ ಬುಲ್ಡೋಜರ್‌ ಕಾರ್ಯಾಚರಣೆಯನ್ನು ಮುಸ್ಲಿಮರಿಗೆ ನೀಡಲಾದ ಸಾಮೂಹಿಕ ಶಿಕ್ಷೆ ಎಂದೂ ಅವರು ಹೇಳಿದ್ದಾರೆ.

ಗಲಭೆ ಪೀಡಿತ ಪ್ರದೇಶದಲ್ಲಿ ಜನರಲ್ಲಿ ಧೈರ್ಯ ತುಂಬುವ ಯತ್ನಗಳು ನಡೆಯುತ್ತಿವೆ ಎಂದು ನೂಹ್‌ ಜಿಲ್ಲಾಧಿಕಾರಿ ಧೀರೇಂದ್ರ ಖಡ್ಗಟಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮುಖ್ಯಮಂತ್ರಿಯನ್ನು ಗುರಿಯಾಗಿಸಿದ ಉವೈಸಿ “ಧೈರ್ಯ ತುಂಬುವುದು ಎಂದರೆ ಒಂದು ಸಮುದಾಯಕ್ಕೆ (ಮುಸ್ಲಿಮರು) ಸೇರಿದ ಕಟ್ಟಡಗಳು, ಮನೆಗಳು, ಮೆಡಿಕಲ್‌ ಸ್ಟೋರ್‌ಗಳು ಮತ್ತು ಗುಡಿಸಲುಗಳನ್ನು ಸೂಕ್ತ ಪ್ರಕ್ರಿಯೆ ಅನುಸರಿಸದೆ ನೆಲಸಮಗೊಳಿಸು ಸಾಮೂಹಿಕ ಶಿಕ್ಷೆ ನೀಡುವುದಾಗಿದೆ. ಖಟ್ಟರ್‌ ಸರ್ಕಾರವು ನ್ಯಾಯಾಲಯಗಳ ಹಕ್ಕುಗಳನ್ನೇ ಸೆಳೆದಿದೆ,” ಎಂದು ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ/ಸಂಘ್‌ ಜೊತೆಗೆ ಸೈದ್ಧಾಂತಿಕವಾಗಿ ಹತ್ತಿರವಿರುವ ಜನರಿಗೆ ವಿಶ್ವಾಸ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ನೂಹ್‌ ಜಿಲ್ಲಾಧಿಕಾರಿ ನೆಲಸಮ ಕಾರ್ಯಾಚರಣೆಯನ್ನು ಉಲ್ಲೇಖಿಸಿ ಅದು ಸಾಮಾನ್ಯ ಪ್ರಕ್ರಿಯೆ ಹಾಗೂ ಯಾರನ್ನೇ ಆದರು ನಿರ್ದಿಷ್ಟವಾಗಿ ಗುರಿಯಾಗಿಸಿ ಕಾರ್ಯಾಚರಣೆ ನಡೆಯುತ್ತಿಲ್ಲ ಎಂದಿದ್ದಾರೆ.

ರಾಜ್ಯ ಸರಕಾರ ಕೂಡ ಬುಲ್‌ ಡೋಜರ್‌ ಕಾರ್ಯಾಚರಣೆಗೂ ನೂಹ್‌ ಗಲಭೆಗೂ ಸಂಬಂಧವಿಲ್ಲ ಎಂದು ಹೇಳಿದೆ.

ನೂಹ್‌ನಲ್ಲಿ ಅಲ್ಲಿನ ಆಡಳಿತ ಕೈಗೊಂಡ ನೆಲಸಮ ಕಾರ್ಯಾಚರಣೆಗಳ ವಿಚಾರವನ್ನು ಸ್ವಯಂಪ್ರೇರಣೆಯಿಂದ ಕೈಗೆತ್ತಿಕೊಂಡ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಈ ಕಾರ್ಯಾಚರಣೆಗೆ ಇಂದು ತಡೆಯಾಜ್ಞೆ ವಿಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News