ಸತತ ನಾಲ್ಕನೆ ದಿನವೂ ಮುಂದುವರಿದ ವಿರೋಧ ಪಕ್ಷಗಳ ಪ್ರತಿಭಟನೆ: ಸೋಮವಾರಕ್ಕೆ ಸಂಸತ್ ಕಲಾಪ ಮುಂದೂಡಿಕೆ

Update: 2024-11-29 08:34 GMT
Photo credit: PTI

ಹೊಸದಿಲ್ಲಿ: ಉದ್ಯಮಿ ಗೌತಮ್ ಅದಾನಿ ವಿರುದ್ಧದ ಲಂಚದ ಆರೋಪ, ಮಣಿಪುರ ಹಿಂಸಾಚಾರ ಹಾಗೂ ಉತ್ತರ ಪ್ರದೇಶದಲ್ಲಿನ ಸಂಭಲ್ ಹಿಂಸಾಚಾರದ ಕುರಿತು ತಕ್ಷಣವೇ ಚರ್ಚೆಗೆ ಅವಕಾಶ ನೀಡದ ಕ್ರಮವನ್ನು ವಿರೋಧಿಸಿ ವಿಪಕ್ಷಗಳು ಸಂಸತ್ತಿನ ಎರಡೂ ಸದನಗಳಲ್ಲಿ ಸತತ ನಾಲ್ಕನೆ ದಿನವೂ ಪ್ರತಿಭಟನೆ ಮುಂದುವರಿಸಿದ್ದರಿಂದ, ಎರಡೂ ಸದನಗಳ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಹೀಗಾಗಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕ್ರಮವಾಗಿ ಕೇವಲ 56 ನಿಮಿಷ ಹಾಗೂ 75 ನಿಮಿಷಗಳ ಕಲಾಪ ಮಾತ್ರ ನಡೆದಿದೆ.

ಮಂಗಳವಾರದಂದು ಸಂವಿಧಾನ ಅಂಗೀಕಾರದ 75ನೇ ವಾರ್ಷಿಕೋತ್ಸವಕ್ಕೆ ಜಂಟಿ ಅಧಿವೇಶನ ಸಾಕ್ಷಿಯಾಯಿತು. ಇದರ ಬೆನ್ನಿಗೇ, ತಾವು ಬಯಸಿದ ವಿಷಯಗಳನ್ನು ಚರ್ಚಿಸಲು ಅವಕಾಶ ದೊರೆಯದಿರುವುದನ್ನು ವಿರೋಧಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ, ಒಂದು ದಿನದ ಮಟ್ಟಿಗೆ ಉಭಯ ಸದನಗಳ ಕಲಾಪವನ್ನು ಮುಂದೂಡಲಾಗಿತ್ತು. ಸಂಸತ್ ಕಲಾಪದ ನಾಲ್ಕನೆ ದಿನವಾದ ಶುಕ್ರವಾರ ಕೂಡಾ ವಿರೋಧ ಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿದ್ದರಿಂದ, ಎರಡೂ ಸದನಗಳ ಕಲಾಪ ಮತ್ತೆ ಸೋಮವಾರಕ್ಕೆ ಮುಂದೂಡಿಕೆಯಾಗಿದೆ.

ನಂತರ ಮಾತನಾಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಜನರು ಸದನವು ಕಾರ್ಯನಿರ್ವಹಿಸಬೇಕು ಹಾಗೂ ಸದನದಲ್ಲಿ ಚರ್ಚೆ ನಡೆಯಬೇಕು ಎಂದು ಬಯಸುತ್ತಿದ್ದಾರೆ ಎಂದು ಹೇಳಿದ್ದರೆ, ನಿಯಮ 267 ಅನ್ನು ಅಡಚಣೆ ತಂತ್ರದ ಅಸ್ತ್ರವನ್ನಾಗಿ ಬಳಸಲಾಗುತ್ತಿದೆ ಎಂದು ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಆರೋಪಿಸಿದ್ದಾರೆ.

ವಿವಾದಿತ ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಪರಿಶೀಲಿಸಲು ರಚಿಸಲಾಗಿರುವ ಜಂಟಿ ಸದನ ಸಮಿತಿಯ ಅವಧಿ ವಿಸ್ತರಣೆ ಸೇರಿದಂತೆ ಕೆಲವು ಪ್ರಶ್ನೆರಗಳನ್ನು ಲೋಕಸಭೆಯಲ್ಲಿ ಕೈಗೆತ್ತಿಕೊಳ್ಳಲಾಯಿತಾದರೂ, ಇಡೀ ವಾರ ಲೋಕಸಭೆಯಲ್ಲಿ ಅಕ್ಷರಶಃ ಯಾವುದೇ ಕಾರ್ಯಕಲಾಪ ನಡೆಯಲಿಲ್ಲ.

ಲೋಕಸಭೆಯ ಕಲಾಪ ಸೋಮವಾರ 6 ನಿಮಿಷ, ಬುಧವಾರ 16 ನಿಮಿಷ, ಗುರುವಾರ 14 ನಿಮಿಷ ಹಾಗೂ ಶುಕ್ರವಾರ 20 ನಿಮಿಷ ಮಾತ್ರ ನಡೆದಿದ್ದರೆ, ರಾಜ್ಯಸಭೆಯ ಕಲಾಪ ಕ್ರಮವಾಗಿ 33 ನಿಮಿಷ, 13 ನಿಮಿಷ, 16 ನಿಮಿಷ ಹಾಗೂ 13 ನಿಮಿಷ ಮಾತ್ರ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News