ಆರ್ ಟಿ ಐ ಕಾಯ್ದೆ ತಿದ್ದುಪಡಿಗೆ ಪ್ರತಿಪಕ್ಷ ತರಾಟೆ; ಕೂಡಲೇ ರದ್ದುಗೊಳಿಸುವಂತೆ ಆಗ್ರಹ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಡಿಜಿಟಲ್ ವೈಯುಕ್ತಿಕ ದತ್ತಾಂಶ ಸಂರಕ್ಷಣೆ ಕಾಯ್ದೆ (ಡಿಪಿಡಿಪಿ)ಯ ಸೆಕ್ಷನ್ 44 (3) ಅನ್ನು ರದ್ದುಗೊಳಿಸುವಂತೆ ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಗುರುವಾರ ಆಗ್ರಹಿಸಿದೆ. ಇದು ಮಾಹಿತಿ ಹಕ್ಕು (ಆರ್ ಟಿ ಐ) ಕಾಯ್ದೆಯನ್ನು ನಾಶಪಡಿಸುತ್ತದೆ ಎಂದು ಅದು ಪ್ರತಿಪಾದಿಸಿದೆ.
ಇಲ್ಲಿ ಜಂಟಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಗೌರವ್ ಗೊಗೋಯಿ, ಈ ಸೆಕ್ಷನ್ ಅನ್ನು ರದ್ದುಗೊಳಿಸಲು ಆಗ್ರಹಿಸಿದ ಜಂಟಿ ಮನವಿಗೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ 120ಕ್ಕೂ ಅಧಿಕ ಸಂಸದರು ಸಹಿ ಹಾಕಿದ್ದಾರೆ. ಇದನ್ನು ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಎಂ. ಅಬ್ದುಲ್ಲಾ (ಡಿಎಂಕೆ), ಪ್ರಿಯಾಂಕಾ ಚತುರ್ವೇದಿ (ಶಿವಸೇನಾ-ಯುಬಿಟಿ), ಜೋನ್ ಬ್ರಿಟ್ಟಾಸ್ (ಸಿಪಿಐ-ಎಂ), ಜಾವೇದ್ ಅಲಿ ಖಾನ್ (ಎಸ್ ಪಿ) ಹಾಗೂ ನವಲ್ ಕಿಶೋರ್ (ಆರ್ ಜೆ ಡಿ) ಪಾಲ್ಗೊಂಡಿದ್ದರು.
ಮಾಹಿತಿ ಹಕ್ಕು ಕಾಯ್ದೆ, 2025ರ ಸೆಕ್ಷನ್ 8 (1)(ಜೆ)ಯ ಸ್ಥಾನಕ್ಕೆ ತರಲು ಉದ್ದೇಶಿಸಲಾದ ಡಿಪಿಡಿಪಿ ಕಾಯ್ದೆಯ ಸೆಕ್ಷನ್ 44 (3) ಅನ್ನು ನಾಗರಿಕ ಹಕ್ಕುಗಳ ಹೋರಾಟಗಾರರು ವಿರೋಧಿಸಿದ್ದಾರೆ.