ಅದಾನಿ ವಿರುದ್ಧ ಲಂಚ, ವಂಚನೆ ಪ್ರಕರಣ: ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದ ಕಾಂಗ್ರೆಸ್
ಹೊಸದಿಲ್ಲಿ: ಗೌತಮ್ ಅದಾನಿ ವಿರುದ್ಧ ಅಮೆರಿಕ ಲಂಚದ ದೋಷಾರೋಪ ಹೊರಿಸಿದ ಬೆನ್ನಿಗೇ, ಅದಾನಿ ಸಮೂಹದ ವ್ಯವಹಾರಗಳ ಕುರಿತು ಜಂಟಿ ಸದನ ಸಮಿತಿ ತನಿಖೆಯನ್ನು ನಡೆಸಬೇಕು ಎಂದು ಪುನರುಚ್ಚರಿಸಿರುವ ಕಾಂಗ್ರೆಸ್, ಗೌತಮ್ ಅದಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ಸಂಬಂಧದ ಕುರಿತು ವ್ಯಂಗ್ಯವಾಡಿದೆ.
US ಪ್ರಾಸಿಕ್ಯೂಟರ್ಗಳು ಗೌತಮ್ ಅದಾನಿ ಮತ್ತಿತರರ ವಿರುದ್ಧ ದೋಷಾರೋಪ ಹೊರಿಸಿರುವುದರಿಂದ, ಅದಾನಿ ಸಮೂಹದ ಕುರಿತು ಜಂಟಿ ಸದನ ಸಮಿತಿ ತನಿಖೆ ನಡೆಸಬೇಕು ಎಂಬ ನಮ್ಮ ಪಕ್ಷದ ಆಗ್ರಹಕ್ಕೆ ಮನ್ನಣೆ ದೊರೆತಂತಾಗಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಅದಾನಿ ಹಾಗೂ ಅವರ ವ್ಯಾಪಾರ ಒಪ್ಪಂದಗಳು ಭಾಗಿಯಾಗಿರುವ ಅಕ್ರಮಗಳ ಕುರಿತು ಜನವರಿ 2023ರಿಂದಲೇ ಕಳವಳ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಲೇ ಬರುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ‘ಹಮ್ ಅದಾನಿ ಕೆ ಹೈಂ’ ಸರಣಿಯ ಕುರಿತು ಉಲ್ಲೇಖಿಸಿದ ಜೈರಾಮ್ ರಮೇಶ್, ಹಗರಣಗಳ ಆರೋಪಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ನಡುವಿನ ಸಂಪರ್ಕದ ಕುರಿತು 100 ಪ್ರಶ್ನೆಗಳನ್ನು ಎತ್ತಲಾಗಿತ್ತು ಎಂದು ಹೇಳಿದ್ದಾರೆ.
ಆದರೆ, ಈ ಪ್ರಶ್ನೆಗಳಿಗೆ ಯಾವುದೇ ಉತ್ತರ ದೊರೆಯಲಿಲ್ಲ ಎಂಬುದರತ್ತ ಬೊಟ್ಟು ಮಾಡಿದ ಅವರು, ಈ ವಿಷಯದ ಕುರಿತು ಉತ್ತರದಾಯಿತ್ವದ ಅಗತ್ಯವಿದೆ ಎಂದು ಪುನರುಚ್ಚರಿಸಿದರು.
ಭಾರತದಲ್ಲಿನ ತಮ್ಮ ಸಂಸ್ಥೆಯ ಸೌರ ವಿದ್ಯುತ್ ಯೋಜನೆಯ ಮಾಹಿತಿಯನ್ನು ಹೂಡಿಕೆದಾರರಿಂದ ಮರೆಮಾಚಿದ್ದ ಗೌತಮ್ ಅದಾನಿ, ಲಂಚ ನೀಡಿಕೆಯಲ್ಲಿ ಭಾಗಿಯಾಗಿದ್ದರು ಎಂದು ಅಮೆರಿಕ ಪ್ರಾಧಿಕಾರಗಳು ದೋಷಾರೋಪ ಹೊರಿಸಿವೆ.
ಯುಎಸ್ ಪ್ರಾಸಿಕ್ಯೂಟರ್ಗಳು ಗೌತಮ್ ಅದಾನಿ ಮತ್ತು ಇತರರ ವಿರುದ್ಧ 250 ಮಿಲಿಯನ್ ಡಾಲರ್ ಲಂಚ ಮತ್ತು ವಂಚನೆ ಆರೋಪ ಮಾಡಿದ ನಂತರ ಅದಾನಿ ಗ್ರೂಪ್ ತನ್ನ 600 ಮಿಲಿಯನ್ ಡಾಲರ್ ಬಾಂಡ್ ಒಪ್ಪಂದವನ್ನು ಕೈಬಿಟ್ಟಿದೆ. ಇದಲ್ಲದೆ ಅದಾನಿ ಗ್ರೂಪ್ ನ ಷೇರುಗಳಲ್ಲಿ 20% ದಷ್ಟು ಕುಸಿದಿದೆ ಮತ್ತು ಅದಾನಿ ಗ್ರೀನ್ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ನಲ್ಲಿ 18% ದಷ್ಟು ಕುಸಿತ ಕಂಡು ಬಂದಿದೆ.