ಶೇ.90ಕ್ಕೂ ಅಧಿಕ ಭಾರತೀಯ ನಗರಗಳು ನೀರು ನಿಲ್ಲುವ ಮತ್ತು ನೆರೆ ಸಮಸ್ಯೆಗಳನ್ನು ಎದುರಿಸುತ್ತಿವೆ: ಸಮೀಕ್ಷಾ ವರದಿ

Update: 2023-07-06 15:36 GMT

Photo: PTI

ಹೊಸದಿಲ್ಲಿ: ಭಾರತದಲ್ಲಿಯ ನಗರಗಳ ಅರ್ಧಕ್ಕೂ ಹೆಚ್ಚಿನ ಪ್ರದೇಶಗಳಲ್ಲಿಯ ರಸ್ತೆಗಳಲ್ಲಿ ನೀರು ನಿಲ್ಲುವುದರಿಂದ ನಿವಾಸಿಗಳು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಜನರ ಸಮಯ,ಶಕ್ತಿ ಮತ್ತು ಉತ್ಪಾದಕತೆ ವ್ಯರ್ಥವಾಗುತ್ತಿದೆ ಎನ್ನುವುದನ್ನು ಹೊಸ ರಾಷ್ಟ್ರೀಯ ಸಮೀಕ್ಷೆಯೊಂದು ತೋರಿಸಿದೆ.

ರಸ್ತೆಗಳಲ್ಲಿ ನೀರು ನಿಲ್ಲುವುದು ಕೆಲಸದ ಅವಧಿಯ ನಷ್ಟ,ಆಸ್ತಿಗಳಿಗೆ ಹಾನಿ,ಸಂಚಾರದಲ್ಲಿ ವಿಳಂಬ ಮತ್ತು ಅಪಘಾತಗಳಿಗೆ ಕಾರಣವಾಗುತ್ತಿದೆ. ಎಲ್ಲ ಶ್ರೇಣಿಗಳ ನಗರಗಳು ಸೇರಿದಂತೆ ನಗರ ಪ್ರದೇಶಗಳು ಜಲಾವೃತಗೊಳ್ಳುವ ಮತ್ತು ಹಠಾತ್ ನೆರೆಯ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿವೆ ಎನ್ನುವುದನ್ನೂ ಸಮೀಕ್ಷೆಯು ಬಹಿರಂಗಗೊಳಿಸಿದೆ. ಭಾರೀ ಮಳೆ ಸುರಿದ ಬಳಿಕ ಪ್ರಮುಖ ನಗರಗಳ ರಸ್ತೆಗಳಲ್ಲಿ ನೀರು ನಿಲ್ಲುವುದು ಸಾಮಾನ್ಯ ದೃಶ್ಯವಾಗಿದೆ. ಭಾರೀ ಮಳೆಯಾಗುತ್ತಿರುವ ಮತ್ತು ರಸ್ತೆಗಳಲ್ಲಿ ನೀರು ನಿಂತಿರುವ ವೀಡಿಯೊಗಳು ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಆದರೆ ರಸ್ತೆಗಳಲ್ಲಿ ನೀರು ನಿಲ್ಲುವ ಮತ್ತು ನೆರೆ ಸಮಸ್ಯೆಗಳು ಪ್ರಮುಖ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ,ಅವು ಎಲ್ಲ ಶ್ರೇಣಿಗಳ ನಗರಗಳಲ್ಲಿ ಸಾಮಾನ್ಯವಾಗಿಬಿಟ್ಟಿವೆ.

ಪ್ರತಿ ಮುಂಗಾರು ಮಳೆಯ ಅವಧಿಯಲ್ಲಿ ತಮ್ಮ ನಗರಗಳು ಅಥವಾ ಜಿಲ್ಲೆಗಳು ಜಲಾವೃತಗೊಳ್ಳುತ್ತವೆ ಎಂದು ಭಾರತದ ಪ್ರಮಖ ಸಾಮಾಜಿಕ ಮಾಧ್ಯಮ ವೇದಿಕೆ ಲೋಕಲ್ಸರ್ಕಲ್ಸ್ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಸುಮಾರು ಶೇ.94ರಷ್ಟು ಜನರು ತಮ್ಮ ಬವಣೆಯನ್ನು ತೋಡಿಕೊಂಡಿದ್ದಾರೆ.

ಸಮೀಕ್ಷೆಗಾಗಿ ಭಾರತದ 293 ಜಿಲ್ಲೆಗಳಲ್ಲಿಯ 22,000ಕ್ಕೂ ಅಧಿಕ ಜನರಿಂದ ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ ಮೂರನೇ ಎರಡರಷ್ಟು ಪುರುಷರಾಗಿದ್ದರೆ ಉಳಿದವರು ಮಹಿಳೆಯರಾಗಿದ್ದರು. ಸುಮಾರು ಅರ್ಧದಷ್ಟು ಜನರು ಮೊದಲ ದರ್ಜೆಯ,ಮೂರನೇ ಒಂದರಷ್ಟು ಜನರು ಎರಡನೇ ದರ್ಜೆಯ ಮತ್ತು ಉಳಿದವರು 3 ಮತ್ತು 4ನೇ ದರ್ಜೆಯ ನಗರಗಳಿಗೆ ಸೇರಿದವರಾಗಿದ್ದರು.

ಹೆಚ್ಚುತ್ತಿರುವ ಬಿಲ್ಟ್-ಅಪ್ ಪ್ರದೇಶಗಳು, ಹರಿಯುತ್ತಿರುವ ನೀರನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಅಥವಾ ನೀರು ಮಣ್ಣಿನಲ್ಲಿ ಇಂಗುವಂತೆ ಮಾಡುವಲ್ಲಿ ವೈಫಲ್ಯ,ಮಳೆನೀರು ನಿರ್ವಹಣೆಯ ಕೊರತೆ ಮತ್ತು ಕಟ್ಟಿಕೊಂಡಿರುವ ಒಳಚರಂಡಿಗಳು ನಗರ ಪ್ರದೇಶಗಳಲ್ಲಿಯ ರಸ್ತೆಗಳಲ್ಲಿ ನೀರು ನಿಲ್ಲಲು ಮತ್ತು ನೆರೆಗೆ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ರಾಫಿಕ್ನಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುವಂತಾಗುವುದು ರಸ್ತೆಗಳಲ್ಲಿ ನೀರು ನಿಲ್ಲುವುದರಿಂದ ನಗರ ಪ್ರದೇಶದ ನಿವಾಸಿಗಳು ಎದುರಿಸುತ್ತಿರುವ ಬಹು ಮುಖ್ಯ ಸಮಸ್ಯೆಯಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.84ರಷ್ಟು ಜನರು ಈ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ವಾಹನಗಳಿಗೆ ಹಾನಿ (ಶೇ.68ರಷ್ಟು ಜನರು),ಅಪಘಾತಗಳ ಅಪಾಯ (ಶೇ.68ರಷ್ಟು ಜನರು) ಮತ್ತು ಕೆಲಸದ ಅವಧಿ/ಉತ್ಪಾದಕತೆಯಲ್ಲಿ ನಷ್ಟ (ಶೇ.54 ರಷ್ಟು ಜನರು) ಇನ್ನಿತರ ಸಮಸ್ಯೆಗಳಾಗಿವೆ.

ಖಾಸಗಿ ವಾಹನಗಳಿಗೆ ಮಾತ್ರವಲ್ಲ,ಬಸ್ಸುಗಳು ನೀರಿನಲ್ಲಿ ಭಾಗಶಃ ಅಥವಾ ಸಂಪೂರ್ಣವಾಗಿ ಜಲಾವೃತಗೊಂಡಾಗ ಸಾರ್ವಜನಿಕ ಆಸ್ತಿಗೂ ಹಾನಿಯಾಗುತ್ತದೆ,ಇದರೊಂದಿಗೆ ರಸ್ತೆ ಮೂಲಸೌಕರ್ಯಕ್ಕೂ ಹಾನಿಯುಂಟಾಗುತ್ತದೆ ಎಂದು ಸಮೀಕ್ಷೆಯು ಬೆಟ್ಟು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News