ಕಿಕ್ಕಿರಿದು ತುಂಬಿರುವ ಜೈಲುಗಳು; ಕೈದಿಗಳ ಹಕ್ಕುಗಳ ಕುರಿತು ಹೆಚ್ಚುತ್ತಿರುವ ಕಳವಳ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಭಾರತೀಯ ಜೈಲುಗಳು ಅಪಾಯಕಾರಿಯಾಗಿ ಕಿಕ್ಕಿರಿದು ತುಂಬಿದ್ದು, ತಮ್ಮ ಸಾಮರ್ಥ್ಯದ ಶೇ.131ರಷ್ಟು(ರಾಷ್ಟ್ರೀಯ ಸರಾಸರಿ) ಕೈದಿಗಳನ್ನು ನಿಭಾಯಿಸುತ್ತಿವೆ. ಕಳೆದೊಂದು ದಶಕದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ ಎನ್ನುವುದನ್ನು ಇಂಡಿಯಾ ಜಸ್ಟಿಸ್ ರಿಪೋರ್ಟ್(ಐಜೆಆರ್) 2025 ಬಹಿರಂಗಗೊಳಿಸಿದೆ.
ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳು ಹೆಚ್ಚಿನ ಪ್ರಮಾಣದಲ್ಲಿ ತುಂಬಿಕೊಂಡಿರುವುದು ಈ ಆತಂಕಕಾರಿ ಸ್ಥಿತಿಗೆ ಪ್ರಮುಖ ಕಾರಣವಾಗಿದ್ದು, ಕೈದಿಗಳ ಒಟ್ಟು ಸಂಖ್ಯೆಯಲ್ಲಿ ಅವರ ಪಾಲು ಶೇ.76ರಷ್ಟಿದೆ. ಕೇವಲ ಹತ್ತು ವರ್ಷಗಳ ಹಿಂದೆ ಅವರ ಸಂಖ್ಯೆ ಶೇ.66ರಷ್ಟಿತ್ತು.
ಜೈಲುಗಳಲ್ಲಿಯ ಈ ಜನದಟ್ಟಣೆಯು ದೀರ್ಘಾವಧಿಯ ವಿಚಾರಣಾಪೂರ್ವ ಬಂಧನದೊಂದಿಗೆ ಸೇರಿಕೊಂಡು ಜೈಲುಗಳ ಸಂಪನ್ಮೂಲಗಳನ್ನು ಕುಗ್ಗಿಸುತ್ತಿದೆ ಮತ್ತು ಕೈದಿಗಳ ಮೂಲಭೂತ ಮಾನವ ಹಕ್ಕುಗಳು ಹಾಗೂ ವಾಸಸ್ಥಿತಿಗಳ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.
ಶೇ.131ರ ರಾಷ್ಟ್ರೀಯ ಸರಾಸರಿಯು ಕೆಲವು ಜೈಲುಗಳಲ್ಲಿಯ ಇನ್ನಷ್ಟು ಹೆಚ್ಚು ಭೀಕರ ಸ್ಥಿತಿಗಳನ್ನು ಮರೆಮಾಡುತ್ತದೆ. 2022ರ ವೇಳೆಗೆ ದೇಶಾದ್ಯಂತ 176 ಜೈಲುಗಳಲ್ಲಿ ಅವುಗಳ ಸಾಮರ್ಥ್ಯದ ದುಪ್ಪಟ್ಟು ಕೈದಿಗಳು ತುಂಬಿಕೊಂಡಿದ್ದರು ಎಂದು ವರದಿಯು ಎತ್ತಿ ತೋರಿಸಿದೆ. 89 ಜೈಲುಗಳು ತಮ್ಮ ಸಾಮರ್ಥ್ಯದ ಶೇ.250ಕ್ಕೂ ಅಧಿಕ ಮತ್ತು 12 ಜೈಲುಗಳು ಶೇ.400ರಷ್ಟು ಕೈದಿಗಳನ್ನು ಹೊಂದಿವೆ.
ಭೌಗೋಳಿಕವಾಗಿ ಈ ಸಮಸ್ಯೆಯು ವ್ಯಾಪಕವಾಗಿದೆ. 2022ರಲ್ಲಿ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೈಲುಗಳಲ್ಲಿ ಸಾಮರ್ಥ್ಯದ ಶೇ.100ಕ್ಕೂ ಅಧಿಕ ಕೈದಿಗಳಿದ್ದರು ಎನ್ನುವುದನ್ನು ದತ್ತಾಂಶಗಳು ತೋರಿಸಿವೆ. ಇದು ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿದ್ದು, ದೇಶಾದ್ಯಂತ ಜೈಲುಗಳಲ್ಲಿ ಕೈದಿಗಳ ದಟ್ಟಣೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಸೂಚಿಸುತ್ತಿದೆ.
ವಿಚಾರಣಾಧೀನ ಕೈದಿಗಳು ಅಗಾಧ ಸಂಖ್ಯೆಯಲ್ಲಿ ತುಂಬಿಕೊಂಡಿರುವುದು ಜೈಲುಗಳು ಕಿಕ್ಕಿರಿಯಲು ಪ್ರಮುಖ ಕಾರಣವಾಗಿದೆ. ವಿಚಾರಣಾಧಿನ ಕೈದಿಗಳ ರಾಷ್ಟ್ರೀಯ ಸರಾಸರಿಯು ಶೇ.76ರಷ್ಟಿದ್ದು, ಕೆಲವು ಕಡೆಗಳಲ್ಲಿ ಇದಕ್ಕಿಂತ ಹೆಚ್ಚು ವಿಚಾರಣಾಧೀನ ಕೈದಿಗಳಿದ್ದಾರೆ. ದಿಲ್ಲಿ ಮತ್ತು ಬಿಹಾರಗಳಲ್ಲಿ ಇವರ ಸಂಖ್ಯೆ ಅನುಕ್ರಮವಾಗಿ ಒಟ್ಟು ಕೈದಿಗಳ ಶೇ.90 ಮತ್ತು ಶೇ.89ರಷ್ಟಿದೆ. ಉತ್ತರ ಪ್ರದೇಶವು ಸ್ವಲ್ಪ ಕಡಿಮೆ ಶೇಕಡಾವಾರು ಪ್ರಮಾಣವನ್ನು ಹೊಂದಿದ್ದರೂ ಅತ್ಯಂತ ಹೆಚ್ಚಿನ, ಅಂದರೆ 94, 000ಕ್ಕೂ ಅಧಿಕ ವಿಚಾರಣಾಧೀನ ಕೈದಿಗಳು ಈ ರಾಜ್ಯದ ಜೈಲುಗಳಲ್ಲಿದ್ದಾರೆ. ಇದು ದೇಶದಲ್ಲಿರುವ ಎಲ್ಲ ವಿಚಾರಣಾಧೀನ ಕೈದಿಗಳ ಶೇ.22ರಷ್ಟಿದೆ. ಇಡೀ ದೇಶದಲ್ಲಿಯ ಒಟ್ಟು ಕೈದಿಗಳ ಪೈಕಿ ಶೇ.42ರಷ್ಟು ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ಈ ಮೂರು ರಾಜ್ಯಗಳಲ್ಲಿಯೇ ಇದ್ದಾರೆ.
ಕಳವಳಕಾರಿ ವಿಷಯವೆಂದರೆ ವಿಚಾರಣೆಗಳು ಅಥವಾ ತನಿಖೆಗಳು ಪೂರ್ಣಗೊಳ್ಳುವಲ್ಲಿ ವಿಳಂಬದಿಂದಾಗಿ ವಿಚಾರಣಾಧೀನ ಕೈದಿಗಳು ಹೆಚ್ಚಿನ ಸಮಯವನ್ನು ಜೈಲುಗಳಲ್ಲಿ ಕಳೆಯುವಂತಾಗಿದೆ. ಇದು ನ್ಯಾಯಾಲಯಗಳಲ್ಲಿ ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಬಾಕಿಯುಳಿದಿರುವುದರ ನೇರ ಪರಿಣಾಮವಾಗಿದೆ. ಡಿಸೆಂಬರ್ 2022ರ ವೇಳೆಗೆ ದೇಶದಲ್ಲಿಯ ಒಟ್ಟು ವಿಚಾರಣಾಧೀನ ಕೈದಿಗಳ ಪೈಕಿ ಶೇ.22ರಷ್ಟು ಜನರು ವಿಚಾರಣೆಗಾಗಿ ಕಾಯುತ್ತ ಒಂದರಿಂದ ಮೂರು ವರ್ಷಗಳವರೆಗೆ ಜೈಲುಗಳಲ್ಲಿ ಕೊಳೆತಿದ್ದರು. 2012ರಲ್ಲಿದ್ದ ಶೇ.18ಕ್ಕೆ ಹೋಲಿಸಿದರೆ ಇದು ಗಮನಾರ್ಹ ಏರಿಕೆಯಾಗಿದೆ.
ಇನ್ನಷ್ಟು ಸುದೀರ್ಘ ಕಾಲ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳ ಸಂಖ್ಯೆ ಇನ್ನೂ ಹೆಚ್ಚು ಕಳವಳಕಾರಿಯಾಗಿದೆ. ಸುಮಾರು 11, 500 ಕೈದಿಗಳು(ಶೇ.2.6) ಐದು ವರ್ಷಗಳಿಗೂ ಹೆಚ್ಚು ಸಮಯದಿಂದ ತಮ್ಮ ವಿಚಾರಣೆ ಪೂರ್ಣಗೊಳ್ಳುವದನ್ನು ಕಾಯುತ್ತಿದ್ದಾರೆ. ಶಿಕ್ಷೆ ವಿಧಿಸಲ್ಪಡದೆ ಈ ದೀರ್ಘಕಾಲದ ಬಂಧನವು ವಿಚಾರಣೆಗಿಂತ ಮೊದಲಿನ ಕಸ್ಟಡಿಯನ್ನು ಶಿಕ್ಷೆಯ ರೂಪವನ್ನಾಗಿ ಪರಿವರ್ತಿಸುತ್ತದೆ ಮತ್ತು ಜೈಲುಗಳ ಸ್ಥಿತಿಯನ್ನು ಇನ್ನಷ್ಟು ಉಲ್ಬಣಿಸುತ್ತದೆ.
ಜೈಲುಗಳಲ್ಲಿ ಇಂತಹ ವಿಪರೀತ ದಟ್ಟಣೆಯು ಈಗಾಗಲೇ ಸೀಮಿತವಾಗಿರುವ ಜೈಲಿನ ಸಂಪನ್ಮೂಲಗಳು ಮತ್ತು ಅಗತ್ಯ ಸಿಬ್ಬಂದಿಗಳ ಸಂಖ್ಯೆಯಲ್ಲಿ ಇನ್ನಷ್ಟು ಕೊರತೆಗೆ ಕಾರಣವಾಗುತ್ತದೆ ಮತ್ತು ಕೈದಿಗಳ ಮೂಲಭೂತ ಹಕ್ಕುಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ ಎಂದು ವರದಿಯು ಒತ್ತಿ ಹೇಳಿದೆ.