ಪಹಲ್ಗಾಮ್ ದಾಳಿ ಹಿನ್ನೆಲೆ; ಇಂಡಸ್ ಜಲ ಒಪ್ಪಂದ ಅಮಾನತು, ಅಟಾರಿ ಗಡಿ ಬಂದ್

PC: x.com/narendramodi
ಹೊಸದಿಲ್ಲಿ: ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧ ಕಟ್ಟುನಿಟ್ಟಿನ ಶಿಕ್ಷಾ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಇಂಡಸ್ ಜಲ ಒಪ್ಪಂದವನ್ನು ಅಮಾನತುಪಡಿಸಿರುವುದಾಗಿ ಬುಧವಾರ ಘೋಷಿಸಿದೆ. ಜತೆಗೆ ಅಟಾರಿ ಗಡಿಯಲ್ಲಿರುವ ಸಮಗ್ರ ಚೆಕ್ ಪೋಸ್ಟ್ ಮುಚ್ಚಲು ಮತ್ತು ಹೈಕಮಿಷನ್ ಗಳ ಒಟ್ಟಾರೆ ಬಲವನ್ನು ಕಡಿತಗೊಳಿಸಲು ನಿರ್ಧರಿಸಿದೆ.
ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ಮಂದಿ ಜೀವ ಕಳೆದುಕೊಂಡಿದ್ದರು. ಘಟನೆ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿ ಬುಧವಾರ ಮುಂಜಾನೆ ವಾಪಸ್ಸಾದ ಪ್ರಧಾನಿ ನರೇಂದ್ರ ಮೋದಿ ಭದ್ರತೆ ಕುರಿತ ಸಂಪುಟ ಸಮಿತಿಯ ಅಧ್ಯಕ್ಷತೆ ವಹಿಸಿದರು. ಸಭೆಯ ವಿವರಗಳನ್ನು ಸರ್ಕಾರಿ ಹೇಳಿಕೆಯಲ್ಲಿ ಬಹಿರಂಗಪಡಿಸಲಾಗಿದ್ದು, ಭಯೋತ್ಪಾದಕ ದಾಳಿಯ ಗಡಿಯಾಚೆಗಿನ ಸಂಬಂಧಗಳನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದೆ.
"ಕೇಂದ್ರಾಡಳಿತ ಪ್ರದೇಶದಲ್ಲಿ ಯಶಸ್ವಿಯಾಗಿ ಚುನಾವಣೆಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಮತ್ತು ಜಮ್ಮು & ಕಾಶ್ಮೀರ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ" ಎಂದು ಸರ್ಕಾರದ ಹೇಳಿಕೆಯಲ್ಲಿ ಆಪಾದಿಸಲಾಗಿದೆ.
ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ 1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಲಾಗುತ್ತಿದೆ. ಅಟಾರಿ ಗಡಿಯ ಸಮಗ್ರ ಚೆಕ್ ಪೋಸ್ಟ್ ಮುಚ್ಚಲಾಗುತ್ತಿದೆ. ಅಧಿಕೃತ ದಾಖಲೆಗಳೊಂದಿಗೆ ಗಡಿ ದಾಟಿ ಬಂದಿರುವವರು 2025ರ ಮೇ 1ರ ಒಳಗಾಗಿ ವಾಪಸ್ಸಾಗಬೇಕು. ಸಾರ್ಕ್ ವೀಸಾ ವಿನಾಯ್ತಿ ಯೋಜನೆಯಡಿ ಭಾರತ ಪ್ರವಾಸ ಕೈಗೊಳ್ಳಲು ಪಾಕಿಸ್ತಾನಿ ಪ್ರಜೆಗಳಿಗೆ ನೀಡಿದ್ದ ಅನುಮತಿ ರದ್ದುಪಡಿಸಲಾಗುವುದು, ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ನ ರಕ್ಷಣಾ/ಸೇನಾ, ನೌಕಾ ಮತ್ತು ವಾಯು ಸಲಹೆಗಾರರ ಹುದ್ದೆಗಳಿಗೆ ಅನುಮತಿ ರದ್ದುಪಡಿಸಲಾಗುವುದು, ಹೈಕಮಿಷನ್ ನ ಒಟ್ಟಾರೆ ಬಲವನ್ನು ಮೇ 1ರಿಂದ ಜಾರಿಯಾಗುವಂತೆ 55 ರಿಂದ 30ಕ್ಕೆ ಇಳಿಸಲಾಗುವುದು ಎಂದು ಸರ್ಕಾರದ ಪ್ರಕಟಣೆ ಹೇಳಿದೆ.