ಪಹಲ್ಗಾಮ್ ದಾಳಿಯು ಗಣರಾಜ್ಯದ ಮೇಲಿನ ನೇರ ದಾಳಿ: ಕಾಂಗ್ರೆಸ್

PC : PTI
ಹೊಸದಿಲ್ಲಿ: ಪಾಕಿಸ್ತಾನವು ಪಹಲ್ಗಾಮ್ ನಲ್ಲಿ ನಡೆದ ‘ಹೇಡಿತನ’ದ ದಾಳಿಯ ರೂವಾರಿಯಾಗಿದೆ ಮತ್ತು ಇದು ನಮ್ಮ ಗಣರಾಜ್ಯ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ. ಏಕತೆಯು ಅತ್ಯಂತ ಅಗತ್ಯವಾಗಿರುವ ಸಮಯದಲ್ಲಿ ಅಸಾಮರಸ್ಯ ಮತ್ತು ಧ್ರುವೀಕರಣವನ್ನು ಉತ್ತೇಜಿಸಲು ಬಿಜೆಪಿಯು ಈ ದುರಂತವನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂದು ಅದು ಆಪಾದಿಸಿದೆ.
ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿಗೆ ಕಾರಣವಾದ ಗುಪ್ತಚರ ವೈಫಲ್ಯಗಳು ಮತ್ತು ಭದ್ರತಾ ಲೋಪಗಳ ಬಗ್ಗೆ ಸಮಗ್ರ ವಿಶ್ಲೇಷಣೆಗಾಗಿ ಕಾಂಗ್ರೆಸ್ ಒತ್ತಾಯಿಸಿದೆ.
ಗುರುವಾರ ಇಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ)ಯ ತುರ್ತುಸಭೆಯು, ಘೋರ ದಾಳಿಯ ಬಗ್ಗೆ ತನ್ನ ತೀವ್ರ ಆಘಾತ ಮತ್ತು ಖಂಡನೆಯನ್ನು ವ್ಯಕ್ತಪಡಿಸಿ ನಿರ್ಣಯವನ್ನು ಅಂಗೀಕರಿಸಿತು.
‘ಸಿಡಬ್ಲ್ಯುಸಿ ಮೃತರ ಕುಟುಂಬಗಳಿಗೆ ತನ್ನ ತೀವ್ರ ಸಂತಾಪಗಳನ್ನು ಸೂಚಿಸುತ್ತದೆ. ಈ ತೀವ್ರ ದುಃಖದ ಘಳಿಗೆಯಲ್ಲಿ ಪಕ್ಷವು ಅವರೊಂದಿಗೆ ನಿಲ್ಲುತ್ತದೆ. ಪಾಕಿಸ್ತಾನವು ರೂವಾರಿಯಾಗಿರುವ ಈ ಹೇಡಿತನದ ಮತ್ತು ಲೆಕ್ಕಾಚಾರದ ದಾಳಿಯು ನಮ್ಮ ಗಣರಾಜ್ಯ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ. ದೇಶಾದ್ಯಂತ ಭಾವನೆಗಳನ್ನು ಕೆರಳಿಸಲು ಹಿಂದುಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿದೆ’ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
‘ಈ ಗಂಭೀರ ಪ್ರಚೋದನೆಯ ಸಂದರ್ಭದಲ್ಲಿ ಶಾಂತವಾಗಿರುವಂತೆ ನಾವು ಮನವಿ ಮಾಡಿಕೊಳ್ಳುತ್ತೇವೆ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ನಮ್ಮ ಸಾಮೂಹಿಕ ಶಕ್ತಿಯನ್ನು ಪುನರುಚ್ಚರಿಸುತ್ತೇವೆ ’ ಎಂದು ನಿರ್ಣಯವು ಹೇಳಿದೆ.