ಪಹಲ್ಗಾಮ್ ದಾಳಿಕೋರರು ಒಂದು ವರ್ಷದ ಹಿಂದೆಯೇ ಸಾಂಬಾ-ಕಥುವಾ ಮೂಲಕ ದೇಶದೊಳಗೆ ನುಸುಳಿದ್ದರು: ವರದಿ

PC : PTI
ಹೊಸದಿಲ್ಲಿ: ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯು ಮುಂದುವರಿದಿದ್ದು, ಈ ನಡುವೆ ಪಹಲ್ಗಾಮ್‌ನಲ್ಲಿ ಪ್ರವಾಸಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ ಭಯೋತ್ಪಾದಕರು ಒಂದು ವರ್ಷದ ಹಿಂದೆಯೇ ಭಾರತದೊಳಗೆ ನುಸುಳಿದ್ದರು ಎನ್ನುವ ಮಾಹಿತಿಯು ಬೆಳಕಿಗೆ ಬಂದಿದೆ. ವರದಿಯ ಪ್ರಕಾರ ಭಯೋತ್ಪಾದಕರು ಗಡಿಬೇಲಿಯನ್ನು ಕತ್ತರಿಸಿ ಸಾಂಬಾ-ಕಥುವಾ ಪ್ರದೇಶದ ಮೂಲಕ ಒಳನುಸುಳಿದ್ದರು ಎನ್ನಲಾಗಿದೆ.
ಭಾರತೀಯ ಅಧಿಕಾರಿಗಳು ಭಯೋತ್ಪಾದಕರನ್ನು ಅಲಿ ಭಾಯಿ ಅಲಿಯಾಸ್ ತಲ್ಹಾ ಮತ್ತು ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಎಂದು ಗುರುತಿಸಿದ್ದಾರೆ. ಮೂಸಾ ಪಾಕಿಸ್ತಾನದ ಮಾಜಿ ಪ್ಯಾರಾ-ಕಮಾಂಡೋ ಎಂದು ಭಯೋತ್ಪಾದನೆ ನಿಗ್ರಹ ಅಧಿಕಾರಿಗಳು ಶಂಕಿಸಿದ್ದಾರೆ.
ನುಸುಳುವಿಕೆಯ ಬಗ್ಗೆ ಅಧಿಕಾರಿಗಳಿಗೆ ತಿಳಿದಿತ್ತು ಮತ್ತು ಕಣಿವೆಯಲ್ಲಿ ಭಯೋತ್ಪಾದಕ ಘಟನೆಯೊಂದರ ಬಳಿಕ ಈ ಬಗ್ಗೆ ತನಿಖೆ ನಡೆಸುತ್ತಿದ್ದರು ಎನ್ನಲಾಗಿದೆ. ಭಯೋತ್ಪಾದಕರು ಅನಂತನಾಗ್‌ನ ಎತ್ತರದ ಪ್ರದೇಶದಲ್ಲಿ ಅಡಗಿದ್ದಾರೆ ಮತ್ತು ಅವರನ್ನು ಬೇಟೆಯಾಡಲು ಪೋಲಿಸರು ತಾಂತ್ರಿಕ ಮತ್ತು ಸ್ಥಳೀಯ ಬುಡಕಟ್ಟು ಮಾಹಿತಿಗಳನ್ನು ಬಳಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಶಂಕಿತರ ಪೈಕಿ ಮೂಸಾ ಪಾಕಿಸ್ತಾನದ ವಿಶೇಷ ಪಡೆಗಳಲ್ಲಿ ಪ್ಯಾರಾ ಕಮಾಂಡೋ ಆಗಿದ್ದ ಮತ್ತು ಹೆಚ್ಚಿನ ಮಿಲಿಟರಿ ತರಬೇತಿಯನ್ನು ಪಡೆದಿದ್ದು, ಇದು ಪ್ರವಾಸಿಗಳ ಮೇಲೆ ದಾಳಿಯ ಬಳಿಕ ಪೋಲಿಸರಿಂದ ತಪ್ಪಿಸಿಕೊಳ್ಳಲು ಆತನಿಗೆ ನೆರವಾಗಿರಬಹುದು ಎಂದು ಪೋಲಿಸರು ಭಾವಿಸಿದ್ದಾರೆ.
ಎಂ4 ರೈಫಲ್‌ಗಳನ್ನು ಬಳಸಲು ತರಬೇತಿಯ ಅಗತ್ಯವಿದೆ ಮತ್ತು ಮೂಸಾ ಪಹಲ್ಗಾಮ್‌ನಲ್ಲಿ ಈ ರೈಫಲ್‌ಗಳನ್ನು ಬಳಸಿದ್ದ ಎಂಬ ಅಂಶವು ಪೋಲಿಸರ ಈ ಲೆಕ್ಕಾಚಾರಕ್ಕೆ ಇಂಬು ನೀಡಿದೆ. ಮೂಸಾ ಈಗ ಲಷ್ಕರೆ ತೈಬಾ(ಎಲ್‌ಇಟಿ)ದ ಹಿರಿಯ ಸದಸ್ಯನಾಗಿದ್ದು,ಪಾಕಿಸ್ತಾನದ ಉನ್ನತ ಮಿಲಿಟರಿ ಘಟಕವಾದ ಸ್ಪೆಷಲ್ ಸರ್ವಿಸ್ ಗ್ರೂಪ್ (ಎಸ್‌ಎಸ್‌ಜಿ) ದಾಳಿ ಕಾರ್ಯಾಚರಣೆಗಾಗಿ ಆತನನ್ನು ಎಲ್‌ಇಟಿಗೆ ನಿಯೋಜಿಸಿದ್ದಿರಬಹುದು.
ಕಳೆದ ವರ್ಷ ಸೋನ್‌ಮಾರ್ಗ್‌ನಲ್ಲಿ ಏಳು ಜನರ ಸಾವಿಗೆ ಕಾರಣವಾಗಿದ್ದ ಝಡ್-ಮೋರ್ ಸುರಂಗ ದಾಳಿಯಲ್ಲಿಯೂ ಮೂಸಾನ ಪಾತ್ರವಿತ್ತೆನ್ನಲಾಗಿದೆ. ಪೋಲಿಸರು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಮತ್ತು ವೀಡಿಯೊ ದೃಶ್ಯಾವಳಿಗಳನ್ನು ಬಳಸಿಕೊಂಡು ಪಹಲ್ಗಾಮ್‌ನಲ್ಲಿ ಮೂಸಾನ ಉಪಸ್ಥಿತಿಯನ್ನು ದೃಢಪಡಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೊಲ್ಲಲ್ಪಟ್ಟಿದ್ದ ಇನ್ನೋರ್ವ ಎಲ್‌ಇಟಿ ಭಯೋತ್ಪಾದಕ ಜುನೈದ್ ಅಹ್ಮದ್ ಭಟ್‌ನಿಂದ ವಶಪಡಿಸಿಕೊಂಡಿದ್ದ ಫೋನ್ ಕೂಡ ಮೂಸಾನನ್ನು ಗುರುತಿಸಲು ಪೋಲಿಸರಿಗೆ ನೆರವಾಗಿದೆ. ಭಟ್‌ನ ಪೋನ್‌ನಲ್ಲಿ ಮೂಸಾ ಮತ್ತು ಇತರ ಭಯೋತ್ಪಾದಕರ ಚಿತ್ರಗಳಿದ್ದವು.
ಅಲಿ ಭಾಯಿ ಮತ್ತು ಮೂಸಾ ಜೊತೆಗೆ ಸ್ಥಳೀಯ ಎಲ್‌ಇಟಿ ಉಗ್ರ ಆದಿಲ್ ಹುಸೇನ್ ಥೋಕರ್‌ನನ್ನು ಮೂರನೇ ಪಹಲ್ಗಾಮ್ ದಾಳಿಕೋರನೆಂದು ಪೋಲಿಸರು ಗುರುತಿಸಿದ್ದಾರೆ. ಖಾಸಗಿ ಶಾಲಾ ಶಿಕ್ಷಕನಾಗಿದ್ದ ಅನಂತನಾಗ್ ನಿವಾಸಿ ಥೋಕರ್ 2018ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ. ಅಲ್ಲಿ ಎಲ್‌ಇಟಿ ಭಯೋತ್ಪಾದಕ ಶಿಬಿರಕ್ಕೆ ಸೇರಿದ್ದ ಆತ ಒಂದೂವರೆ ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದ.