ಪಹಲ್ಗಾಮ್ ಭಯೋತ್ಪಾದಕ ದಾಳಿ | ಕಾಶ್ಮೀರಿ ವ್ಯಾಪಾರಿಯಿಂದ ನಾಲ್ಕು ಕುಟುಂಬಗಳ ರಕ್ಷಣೆ

PC : PTI
ರಾಯಪುರ: ಜಮ್ಮು ಹಾಗೂ ಕಾಶ್ಮೀರದ ಪಹಲ್ಗಾಂವ್ ನಲ್ಲಿ ಭಯೋತ್ಪಾದಕ ದಾಳಿ ನಡೆದ ಸಂದರ್ಭ ಕಾಶ್ಮೀರದ ವ್ಯಾಪಾರಿಯೊಬ್ಬರು ನಾಲ್ಕು ಕುಟುಂಬಗಳನ್ನು ರಕ್ಷಿಸಿದ್ದಾರೆ.
ಪ್ರತಿ ಚಳಿಗಾಲದಲ್ಲಿ ಚತ್ತೀಸ್ ಗಢದ ಚಿರ್ಮಿರಿ ಪಟ್ಟಣಕ್ಕೆ ಭೇಟಿ ನೀಡುವ ಕಾಶ್ಮೀರಿ ಉಣ್ಣೆ ಬಟ್ಟೆ ವ್ಯಾಪಾರಿ ನಝಕತ್ ಅಲಿ ಅವರು ಪಹಲ್ಗಾಮ್ನ ಪ್ರವಾಸಿ ತಾಣದಲ್ಲಿ ಹಠಾತ್ ಭಯೋತ್ಪಾದಕ ದಾಳಿ ನಡೆದಾಗ ಸಿಲುಕಿದ ಚತ್ತೀಸ್ ಗಢದ ನಾಲ್ಕು ಕುಟುಂಬಗಳನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ.
ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿದ್ದ 4 ಕುಟುಂಬಗಳಲ್ಲಿ ಮೂವರು ಮಕ್ಕಳು ಸೇರಿದಂತೆ 11 ಮಂದಿ ಸದಸ್ಯರಿದ್ದರು. ಶಿವಾಂಶು ಜೈನ್, ಅರವಿಂದ ಅಗ್ರವಾಲ್, ಹ್ಯಾಪಿ ವಾಧವಾನ್ ಹಾಗೂ ಕುಲದೀಪ್ ಸಪ್ತಕ್ ಎಪ್ರಿಲ್ 18ರಂದು ಚಿರ್ಮಿರಿಯಿಂದ ನಿರ್ಗಮಿಸಿದ್ದರು. ಅವರು ಎಪ್ರಿಲ್ 21ರಂದು ಪಹಲ್ಗಾಮ್ಗೆ ತಲುಪಿದ್ದರು. ಅವರು ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಸಂದರ್ಭ ಉಗ್ರರು ಪ್ರವಾಸಿಗಳ ಮೇಲೆ ಗುಂಡು ಹಾರಿಸಿದ್ದಾರೆ.
‘‘ಭೂಕುಸಿತದಂತೆ ಕಾಣುವ ಸನ್ನಿವೇಶದ ಕಾರಣದಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಪ್ರವಾಸಿಗರು ರಸ್ತೆಯ ಎರಡೂ ಬದಿಗಳಲ್ಲಿ ಸೇರಿದರು. ಇದ್ದಕ್ಕಿದ್ದಂತೆ ಗುಂಡಿನ ದಾಳಿ ಆರಂಭವಾಯಿತು. ಏನಾಗುತ್ತಿದೆ ಎಂದು ತಿಳಿಯುವ ಮುನ್ನವೇ ಗುಂಡಿನ ದಾಳಿ ಬೈಸರನ್ ಪ್ರದೇಶದಲ್ಲಿ ಪ್ರತಿಧ್ವನಿಸಿತು. ಆತಂಕಿತರಾದ ಪ್ರವಾಸಿಗರು ಜೀವ ರಕ್ಷಿಸಿಕೊಳ್ಳಲು ಓಡಿದರು. ನೆರವಿಗಾಗಿ ಕೂಗಿದರು’’ ಎಂದು ಭಯೋತ್ಪಾದಕ ದಾಳಿಯ ಪ್ರತ್ಯಕ್ಷದರ್ಶಿಯಾಗಿರುವ ಜೈನ್ ತಿಳಿಸಿದ್ದಾರೆ.
ಚಿರ್ಮಿರಿ ನಿವಾಸಿಗಳಿಗೆ ಚಿರಪಚಿತರಾಗಿರುವ ನಝಕತ್ ಅಲಿ ಅವರು ಎಲ್ಲಾ ನಾಲ್ಕು ಕುಟುಂಬಗಳನ್ನು ಸ್ಥಳದಿಂದ ಸುರಕ್ಷಿತವಾಗಿ ದೂರ ಕರೆದುಕೊಂಡು ಹೋದರು ಎಂದು ಅವರು ತಿಳಿಸಿದ್ದಾರೆ.
‘‘ಪಹಲ್ಗಾಂಮ್ಗೆ ತಲುಪಿದ ಬಳಿಕ ನಾವು ನಮಗೆ ಚಿರಪರಿಚಿತರಾಗಿರುವ ಸ್ಥಳೀಯ ನಿವಾಸಿ ನಝಕತ್ ಅಲಿ ಅವರನ್ನು ಸಂಪರ್ಕಿಸಿದೆವು. ನಾವು ಅವರೊಂದಿಗೆ ಪಹಲ್ಗಾಮ್ನ ಸುತ್ತಮುತ್ತ ಇರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಹೊರಟೆವು. ಗುಂಡಿನ ದಾಳಿಯ ಆಘಾತ ಹಾಗೂ ಆತಂಕದ ವಾತಾವರಣ ಸೃಷ್ಟಿಯಾದಾಗ ಅಲಿ ಜಾಣತನದಿಂದ ನಮ್ಮೆಲ್ಲರನ್ನು ಆ ಭಯಾನಕ ಸ್ಥಳದಿಂದ ಸುರಕ್ಷಿತವಾಗಿ ದೂರ ಕರೆದೊಯ್ದರು’’ ಎಂದು ಹ್ಯಾಪಿ ವಾಧವಾನ್ ತಿಳಿಸಿದ್ದಾರೆ.