ಪಹಲ್ಗಾಮ್ ದಾಳಿ| ಜಮ್ಮುಕಾಶ್ಮೀರದಲ್ಲಿ ಸಹಜ ಸ್ಥಿತಿ ಸ್ಥಾಪಿಸಿದ್ದೇವೆ ಎಂದು ಸುಳ್ಳು ಹೇಳುವ ಬದಲು ಸೂಕ್ತ ಕ್ರಮ ಕೈಗೊಳ್ಳಿ; ಕೇಂದ್ರ ಸರಕಾರಕ್ಕೆ ಪ್ರತಿಪಕ್ಷಗಳ ಆಗ್ರಹ

Update: 2025-04-23 13:28 IST
ಪಹಲ್ಗಾಮ್ ದಾಳಿ| ಜಮ್ಮುಕಾಶ್ಮೀರದಲ್ಲಿ ಸಹಜ ಸ್ಥಿತಿ ಸ್ಥಾಪಿಸಿದ್ದೇವೆ ಎಂದು ಸುಳ್ಳು ಹೇಳುವ ಬದಲು ಸೂಕ್ತ ಕ್ರಮ ಕೈಗೊಳ್ಳಿ; ಕೇಂದ್ರ ಸರಕಾರಕ್ಕೆ ಪ್ರತಿಪಕ್ಷಗಳ ಆಗ್ರಹ

Photo credit: PTI

  • whatsapp icon

ಹೊಸದಿಲ್ಲಿ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಪ್ರತಿಪಕ್ಷಗಳು ಬಲವಾಗಿ ಖಂಡಿಸಿದೆ. ಜಮ್ಮುಕಾಶ್ಮೀರದಲ್ಲಿ ಸಹಜ ಸ್ಥಿತಿ ಸ್ಥಾಪಿಸಿದ್ದೇವೆ ಎಂದು ಸುಳ್ಳು ಹೇಳಿಕೆ ನೀಡುವ ಬದಲು ಸರಕಾರ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್, ಸಿಪಿಐ(ಎಂ) ಸೇರಿದಂತೆ ಪ್ರತಿಪಕ್ಷಗಳು ಆಗ್ರಹಿಸಿದೆ.

ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಈ ಭೀಕರ ದಾಳಿಗಳು ಮಾನವೀಯತೆಯ ಮೇಲಿನ ಕಳಂಕವಾಗಿದೆ. ಭಾರತದ ರಾಷ್ಟ್ರೀಯ ಭದ್ರತೆಯು ಪ್ರಮುಖವಾಗಿರುವುದರಿಂದ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ʼಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಹೋರಾಡಲು ಇಡೀ ರಾಷ್ಟ್ರವು ಒಗ್ಗಟ್ಟಾಗಿದೆ.

ಈ ಭೀಕರ ದಾಳಿಗಳು ಮಾನವೀಯತೆಯ ಮೇಲಿನ ಕಳಂಕವಾಗಿವೆ. ಅಮೂಲ್ಯ ಜೀವಗಳು ಬಲಿಯಾಗಿವೆ. ಕಾಂಗ್ರೆಸ್ ಪಕ್ಷದ ಪರವಾಗಿ ಸಂತ್ರಸ್ತ ಕುಟುಂಬಗಳಿಗೆ ನಾನು ಸಂತಾಪವನ್ನು ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಭಾರತದ ರಾಷ್ಟ್ರೀಯ ಭದ್ರತೆಯು ಅತಿಮುಖ್ಯವಾಗಿದೆ ಮತ್ತು ಅದನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಭಾರತ ಸರಕಾರಕ್ಕೆ ಆಗ್ರಹಿಸುತ್ತಿದ್ದೇವೆʼ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರಾಹುಲ್ ಗಾಂಧಿ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯು ಅತ್ಯಂತ ಖಂಡನೀಯ ಮತ್ತು ಹೃದಯವಿದ್ರಾವಕ. ನಾನು ದುಃಖಿತ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.

ಭಯೋತ್ಪಾದನೆ ವಿರುದ್ಧ ಇಡೀ ದೇಶ ಈಗ ಒಗ್ಗಟ್ಟಾಗಿದೆ. ಜಮ್ಮುಕಾಶ್ಮೀರದಲ್ಲಿ ಪರಿಸ್ಥಿತಿ ಸಹಜವಾಗಿದೆ ಎಂದು ಪೊಳ್ಳು ಹೇಳಿಕೆಗಳನ್ನು ನೀಡುವ ಬದಲು ಸರಕಾರ ಈಗ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು, ಭವಿಷ್ಯದಲ್ಲಿ ಇಂತಹ ಅಮಾನುಷ ಘಟನೆಗಳು ಮರುಕಳಿಸದಂತೆ ಮತ್ತು ಅಮಾಯಕ ಭಾರತೀಯರು ಈ ರೀತಿ ಪ್ರಾಣ ಕಳೆದುಕೊಳ್ಳದಂತೆ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಕುರಿತು ಸರ್ವಪಕ್ಷಗಳ ಸಭೆಯನ್ನು ಕರೆಯುವಂತೆ ಪ್ರಧಾನಿಗೆ ಒತ್ತಾಯಿಸಿದ್ದಾರೆ.

ಸಿಪಿಐ(ಎಂ) ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ಘೋರ ಹಿಂಸಾಚಾರದ ಅಪರಾಧಿಗಳನ್ನು ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಹೇಳಿದೆ.

ಈ ಭಯೋತ್ಪಾದನಾ ದಾಳಿಯು ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ ಮತ್ತು ಶಾಂತಿಯನ್ನು ಪುನಃಸ್ಥಾಪಿಸಲಾಗಿದೆ ಎಂಬ ಮೋದಿ-ಶಾ ಜೋಡಿಯ ಸುಳ್ಳು ಭರವಸೆಯನ್ನು ಬಹಿರಂಗಪಡಿಸುತ್ತದೆ. ಜಮ್ಮು ಮತ್ತು ಕಾಶ್ಮೀರದ ಜನರ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಂಡು ಹಿಡಿಯುವ ದೃಷ್ಟಿಯಿಂದ ಭಾರತ ಸರಕಾರ ಯಾವುದೇ ಸಮಯವನ್ನು ವ್ಯರ್ಥ ಮಾಡಬಾರದು ಎಂದು ಹೇಳಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರವಾಸಿಗರ ಮೇಲಿನ ದಾಳಿಯನ್ನು ಖಂಡಿಸಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಆಗ್ರಹಿಸಿದ್ದಾರೆ. ಕೇಂದ್ರ ಸರಕಾರ ಮೊದಲು ಸುರಕ್ಷಿತ ವಾತಾವರಣವನ್ನು ಖಚಿತಪಡಿಸಬೇಕು. ಆಗ ಮಾತ್ರ ಸ್ಥಳೀಯ ನಿವಾಸಿಗಳು ಮತ್ತು ಪ್ರವಾಸಿಗರ ಜೀವನ ಸುರಕ್ಷಿತವಾಗಿರಲು ಸಾಧ್ಯ ಎಂದು ಹೇಳಿದರು.

ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಘಟನೆಯನ್ನು ಖಂಡಿಸಿದ್ದು, ನಿರಾಯುಧರಾದ ಅಮಾಯಕರನ್ನು ಗುರಿಯಾಗಿಸುವುದು ಮಾನವೀಯತೆಯ ಮೇಲಿನ ದಾಳಿಯಾಗಿದೆ. ಈ ದುಃಖದ ಕ್ಷಣದಲ್ಲಿ ಇಡೀ ದೇಶವು ಒಗ್ಗೂಡಿದೆ. ನಾವು ಪ್ರತಿಯೊಂದು ರೀತಿಯ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ʼಈ ಹಿಂಸಾಚಾರವು ಸಂಪೂರ್ಣವಾಗಿ ಖಂಡನೀಯವಾಗಿದೆ ಮತ್ತು ಕೃತ್ಯಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕುʼ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಭಯೋತ್ಪಾದನಾ ದಾಳಿಯನ್ನು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ. ಅಪರಾಧಿಗಳು ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆಗೆ ಅರ್ಹರು ಎಂದು ಹೇಳಿದ್ದಾರೆ.

ಜಮ್ಮುಕಾಶ್ಮೀರದಲ್ಲಿ ಪರಿಸ್ಥಿತಿ ಸಹಜವಾಗಿದೆ ಮತ್ತು ರಾಷ್ಟ್ರೀಯ ಭದ್ರತೆಯ ಬಗೆಗಿನ ವಾಸ್ತವ ಬಹಿರಂಗವಾಗಿದೆ. ಭಯೋತ್ಪಾದಕ ದಾಳಿಗಳು ಈ ಪ್ರದೇಶದಲ್ಲಿ ಮುಂದುವರಿದಿದೆ. ನಾಗರಿಕರು, ವಲಸೆ ಕಾರ್ಮಿಕರು ಮತ್ತು ಪ್ರವಾಸಿಗರ ಮೇಲಿನ ದಾಳಿಗಳಲ್ಲಿ ಹೆಚ್ಚಳವಾಗಿದೆ ಎಂದು ಸಿಪಿಐ(ಎಂಎಲ್) ಹೇಳಿಕೆಯಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News