ಪಹಲ್ಗಾಮ್ ಭಯೋತ್ಪಾದನಾ ದಾಳಿ : ಎನ್ಐಎ ತನಿಖೆಗೆ ಹಸ್ತಾಂತರಿಸಿದ ಕೇಂದ್ರ ಸರಕಾರ
Update: 2025-04-27 10:03 IST

Photo | Reuters
ಹೊಸದಿಲ್ಲಿ : ಪಹಲ್ಗಾಮ್ ಭಯೋತ್ಪಾದನಾ ದಾಳಿಯ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ಎನ್ಐಎ ತನಿಖೆಗೆ ಒಪ್ಪಿಸಿದೆ.
ಎಪ್ರಿಲ್ 22ರಂದು ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರ ದಾಳಿಗೆ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದರು.ಶನಿವಾರ, ಮೂವರು ಸದಸ್ಯರಿದ್ದ ಎನ್ಐಎ ತಂಡ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದವರ ಹೇಳಿಕೆಗಳನ್ನು ದಾಖಲಿಸಿದೆ.
ಭಯೋತ್ಪಾದನಾ ದಾಳಿಗೆ ಸಂಬಂಧಿಸಿ ಗುಪ್ತಚರ ಸಂಸ್ಥೆಗಳು 14 ಭಯೋತ್ಪಾದಕರನ್ನು ಗುರುತಿಸಿವೆ. ಅವರಲ್ಲಿ ಎಂಟು ಮಂದಿ ಲಷ್ಕರೆ ತೈಬಾಗೆ ಸೇರಿದವರು ಮತ್ತು ತಲಾ ಮೂವರು ಪ್ರಸ್ತುತ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿರುವ ಜೆಇಎಂ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಗೆ ಸೇರಿದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ಸಂಸ್ಥೆಗಳು ಈ ಪ್ರದೇಶದಲ್ಲಿ 50 ರಿಂದ 60 ಮಂದಿ ಸಕ್ರಿಯ ಭಯೋತ್ಪಾದಕರಿರುವ ಬಗ್ಗೆ ಹೇಳಿಕೊಂಡಿವೆ. ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸುತ್ತಿದೆ.