ಕಾಶ್ಮೀರದಲ್ಲಿ ಉಗ್ರರ ದಾಳಿ: ಪತ್ನಿ, ಮಕ್ಕಳ ಎದುರೇ ಹತ್ಯೆಗೀಡಾದ ಗುಪ್ತಚರ ಅಧಿಕಾರಿ

ಮನೀಶ್ ರಂಜನ್ PC: x.com/ndtv
ಹೈದರಾಬಾದ್: ಕಾಶ್ಮೀರದಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಹೈದರಾಬಾದ್ ಗುಪ್ತಚರ ವಿಭಾಗ (ಇಂಟೆಲಿಜೆನ್ಸ್ ಬ್ಯೋರೊ) ಅಧಿಕಾರಿ ತಮ್ಮ ಪತ್ನಿ ಮತ್ತು ಮಕ್ಕಳ ಎದುರೇ ಹತ್ಯೆಗೀಡಾದ್ದಾರೆ. ಬಿಹಾರ ಮೂಲದ ಮನೀಶ್ ರಂಜನ್ ಹತ್ಯೆಗೀಡಾದ ಅಧಿಕಾರಿ.
ಹೈದರಾಬಾದ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಕುಟುಂಬದ ಜತೆ ಎಲ್ ಟಿಸಿ ಪ್ರವಾಸದಲ್ಲಿದ್ದರು. ಇತರ ಹಲವು ಪ್ರವಾಸಿಗಳ ಜತೆ ಮನೀಶ್ ಕುಟುಂಬ ಕೂಡಾ ಮಿನಿ ಸ್ವಿಡ್ಜರ್ ಲೆಂಡ್ ಎನಿಸಿದ ಪಹಲ್ಗಾಂವ್ ನ ಬೈಸರನ್ ಕಣಿವೆಯಲ್ಲಿ ವಿಹಾರದಲ್ಲಿದ್ದ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸಿದರು. ಮನೀಶ್ ಅವರು ಹೈದರಾಬಾದ್ ನ ಐಬಿಯ ಸಚಿವಾಲಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ಭಯಾನಕ ದಾಳಿಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಮಹಾರಾಷ್ಟ್ರದ ಕುಟುಂಬವೊಂದು ತಮ್ಮ ಅನುಭವ ಹಂಚಿಕೊಂಡಿದೆ. ಕೇವಲ 20 ನಿಮಿಷ ಅಂತರದಲ್ಲಿ ಅವರು ದಾಳಿಯಿಂದ ಪಾರಾಗಿದ್ದರು. ದಾಳಿ ನಡೆಯುವ 20 ನಿಮಿಷ ಮುನ್ನ ಅವರು ಪಹಲ್ಗಾಂವ್ ಬಿಟ್ಟಿದ್ದರು. "ಸುಧೀರ್ಘ ಕಾಲ ಗುಂಡು ಹಾರಿಸುವ ಸದ್ದು ಕೇಳಿಸಿತು. ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸಿದರು. ನಾವು 20 ನಿಮಿಷ ಮೊದಲಷ್ಟೇ ಅಲ್ಲಿಂದ ಹೊರಟಿದ್ದೆವು" ಎಂದು ನಾಗ್ಪುರದ ಕುಟುಂಬ ವಿವರಿಸಿದೆ.
ಈ ಘಟನೆಯನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಖಂಡಿಸಿದ್ದಾರೆ. ಇದರಲ್ಲಿ ಷಾಮೀಲಾದ ಉಗ್ರ ಸಂಘಟನೆ ವಿರುದ್ಧ ಕೇಂದ್ರ ಸರ್ಕಾರ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡಾ ಘಟನೆಯನ್ನು ಖಂಡಿಸಿದ್ದಾರೆ. ಭಾರತ ರಾಷ್ಟ್ರೀಯ ಸಮಿತಿ ಕಾರ್ಯಾಧ್ಯಕ್ಷ ಕ.ಟಿ.ರಾಮರಾವ್ ಅವರು ಘಟನೆ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.