ಪಾಕಿಸ್ತಾನ ಸೇನಾ ಮುಖ್ಯಸ್ಥರ ಕಾಶ್ಮೀರ ಹೇಳಿಕೆಗೆ ಭಾರತದ ತೀಕ್ಷ್ಣ ತಿರುಗೇಟು
ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ - Image Credit: Videograb
ಹೊಸದಿಲ್ಲಿ: ಜಮ್ಮುಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿದೆ ಮತ್ತು ಪಾಕಿಸ್ತಾನದೊಂದಿಗೆ ಅದರ ಏಕೈಕ ಸಂಬಂಧವೆಂದರೆ ಆ ದೇಶವು ತಾನು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವ ಪ್ರದೇಶವನ್ನು ಬಿಟ್ಟುಕೊಡುವುದು ಎಂದು ಭಾರತವು ಗುರುವಾರ ಹೇಳಿದೆ.
ಕಾಶ್ಮೀರವು ಪಾಕಿಸ್ತಾನದ ‘ಕಂಠನಾಳ’ವಾಗಿದೆ ಎಂಬ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಪರಕೀಯ ವಸ್ತುಗಳು ಕಂಠನಾಳದಲ್ಲಿ ಇರಲು ಹೇಗೆ ಸಾಧ್ಯ? ಜಮ್ಮುಕಾಶ್ಮೀರವು ಭಾರತದ ಕೇಂದ್ರಾಡಳಿತ ಪ್ರದೇಶವಾಗಿದೆ,ಆ ದೇಶವು ಅಕ್ರಮವಾಗಿ ವಶಪಡಿಸಿಕೊಂಡಿರುವ ಭೂಪ್ರದೇಶಗಳನ್ನು ತೆರವುಗೊಳಿಸಬೇಕು. ಇದೊಂದೇ ಜಮ್ಮುಕಾಶ್ಮೀರದೊಂದಿಗೆ ಅದರ ಏಕೈಕ ಸಂಬಂಧವಾಗಿದೆ ಎಂದು ಹೇಳಿದೆ.
ಇತ್ತೀಚಿಗೆ ಇಸ್ಲಾಮಾಬಾದ್ನಲ್ಲಿ ಸಾಗರೋತ್ತರ ಪಾಕಿಸ್ತಾನಿಗಳ ಸಮ್ಮೇಳನದಲ್ಲಿ ಮಾತನಾಡಿದ ಸಂದರ್ಭ ಮುನೀರ್,‘ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಅದು(ಜಮ್ಮುಕಾಶ್ಮೀರ) ನಮ್ಮ ಕಂಠನಾಳವಾಗಿತ್ತು,ಅದು ನಮ್ಮ ಕಂಠನಾಳವಾಗಿರುತ್ತದೆ,ನಾವು ಅದನ್ನು ಮರೆಯುವುದಿಲ್ಲ. ನಾವು ನಮ್ಮ ಕಾಶ್ಮೀರಿ ಸೋದರರನ್ನು ಅವರ ವೀರೋಚಿತ ಹೋರಾಟದಲ್ಲಿ ಒಂಟಿಯಾಗಿ ಬಿಡುವುದಿಲ್ಲ’ ಎಂದು ಹೇಳಿದ್ದರು.
ಭಯೋತ್ಪಾದಕ ಚಟುವಟಿಕೆಗಳಿಂದಾಗಿ ಪಾಕಿಸ್ತಾನಕ್ಕೆ ಹೂಡಿಕೆಗಳು ಹರಿದುಬರುವುದಿಲ್ಲ ಎನ್ನುವುದನ್ನು ತಳ್ಳಿಹಾಕಿದ್ದ ಮುನೀರ್,‘ಭಯೋತ್ಪಾದಕರು ನಮ್ಮ ದೇಶದ ವಿಧಿಯನ್ನು ಕಿತ್ತುಕೊಳ್ಳುತ್ತಾರೆ ಎಂದು ನೀವು ಭಾವಿಸಿದ್ದೀರಾ? 13 ಲಕ್ಷ ಸಂಖ್ಯಾಬಲದ ಭಾರತೀಯ ಸೇನೆಗೇ ತನ್ನ ಎಲ್ಲ ಸಾಮರ್ಥ್ಯಗಳೊಂದಿಗೆ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಹೀಗಿರುವಾಗ ಭಯೋತ್ಪಾದಕರು ಪಾಕಿಸ್ತಾನದ ಸಶಸ್ತ್ರ ಪಡೆಗಳನ್ನು ಮಣಿಸುತ್ತಾರೆ ಎಂದು ನೀವು ಭಾವಿಸಿದ್ದೀರಾ?’ ಎಂದು ಪ್ರಶ್ನಿಸಿದ್ದರು.