ಪಾಕ್ ರಕ್ಷಣಾ ಸಚಿವರ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ

ಖ್ವಾಜಾ ಆಸಿಫ್ | PC : NDTV
ಹೊಸದಿಲ್ಲಿ: ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ಭಾರತ ಸರಕಾರದ ಔಪಚಾರಿಕ ಬೇಡಿಕೆಯ ಮೇರೆಗೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಎಕ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಆಸಿಫ್ ಅವರ ಅಧಿಕೃತ ಹ್ಯಾಂಡಲ್ ಮೂಲಕ ತಪ್ಪು ಮಾಹಿತಿಗಳು ಮತ್ತು ಸುಳ್ಳು ಸುದ್ದಿಗಳ ಹರಡುವಿಕೆ ಹಾಗೂ ಪಾಕಿಸ್ತಾನವು ಅಮೆರಿಕ ಮತ್ತು ಬ್ರಿಟನ್ ಸೂಚನೆಯ ಮೇರೆಗೆ ಭಾರತದ ವಿರುದ್ಧ ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುತ್ತಿತ್ತು ಎಂದು ಆಸಿಫ್ ಕ್ಯಾಮೆರಾದ ಮುಂದೆ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಅವರ ಎಕ್ಸ್ ಖಾತೆಯನ್ನು ಅಮಾನತುಗೊಳಿಸಲಾಗಿದೆ.
ಐಎಸ್‌ಐಗಾಗಿ ಕೆಲಸ ಮಾಡುತ್ತಿದ್ದರು ಎನ್ನಲಾದ ಕೆಲವು ಪಾಕಿಸ್ತಾನಿ ಪತ್ರಕರ್ತರ ಎಕ್ಸ್ ಖಾತೆಗಳನ್ನೂ ಅಮಾನತು ಮಾಡಲಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ, ಅದರ ಸೇನೆ ಮತ್ತು ಭದ್ರತಾ ಸಂಸ್ಥೆಗಳ ವಿರುದ್ಧ ಪ್ರಚೋದನಕಾರಿ, ಕೋಮು ಸೂಕ್ಷ್ಮ ಕಂಟೆಂಟ್‌ಗಳನ್ನು ಮತ್ತು ತಪ್ಪು ಮಾಹಿತಿಗಳನ್ನು ಹರಡುತ್ತಿದ್ದ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ಸೋಮವಾರ ಕೇಂದ್ರ ಸರಕಾರವು ನಿಷೇಧಿಸಿತ್ತು.
ಕಳೆದ ವಾರ ವೈರಲ್ ವೀಡಿಯೊ ತುಣುಕಿನಲ್ಲಿ ಪಾಕ್ ರಕ್ಷಣಾ ಸಚಿವರು ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳಿಗೆ ಆರ್ಥಿಕ ನೆರವು ಮತ್ತು ಬೆಂಬಲವನ್ನು ಒದಗಿಸುತ್ತಿದೆ ಎಂದು ಒಪ್ಪಿಕೊಂಡಿದ್ದರು.
ಸ್ಕೈನ್ಯೂಸ್‌ನ ಯಾಲ್ದಾ ಹಕೀಮ್ ಅವರಿಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಆಸಿಫ್,‘ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಪಾಶ್ಚಾತ್ಯ ದೇಶಗಳ ಸೂಚನೆಯಂತೆ ನಾವು ಕಳೆದ ಮೂರು ದಶಕಗಳಿಂದಲೂ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ. ಅದು ನಮ್ಮ ತಪ್ಪಾಗಿತ್ತು ಮತ್ತು ಅದರಿಂದ ನಾವು ಸಾಕಷ್ಟು ಅನುಭವಿಸಿದ್ದೇವೆ’ ಎಂದು ಹೇಳಿದ್ದರು.