ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು: ಅಮಿತ್ ಶಾ
ಹೈದರಾಬಾದ್: ಕಾಂಗ್ರೆಸ್ ಮತ್ತು ಅದರ ನಾಯಕರ ವಿರುದ್ಧ ಶನಿವಾರ ಇಲ್ಲಿ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಪಾಕಿಸ್ತಾನದ ಬಳಿ ಅಣು ಬಾಂಬ್ ಇದೆ ಎಂಬ ಭೀತಿಯಿಂದ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ಮೇಲಿನ ಭಾರತದ ಹಕ್ಕುಗಳನ್ನು ಬಿಟ್ಟು ಕೊಡಲು ಕಾಂಗ್ರೆಸ್ ಪಕ್ಷವು ಬಯಸಿದೆ ಎಂದು ಹೇಳಿದರು.
ಇಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಶಾ, ಪಾಕಿಸ್ತಾನದ ಬಳಿ ಅಣು ಬಾಂಬ್ ಇದೆ, ಆದ್ದರಿಂದ ಭಾರತವು ಪಿಒಕೆ ಕುರಿತು ಮಾತನಾಡಬಾರದು ಎಂದು ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ ಹೇಳಿದ್ದಾರೆ. ಅಣು ಬಾಂಬ್ ಭೀತಿಯಿಂದ ಪಿಒಕೆ ಮೇಲಿನ ಹಕ್ಕುಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ಬಯಸುತ್ತಿದೆ. ಚಿಂತಿಸಬೇಡಿ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಮತ್ತು ಪಾಕಿಸ್ತಾನದ ಗುಂಡುಗಳಿಗೆ ಫಿರಂಗಿಯಿಂದ ಉತ್ತರ ನೀಡಲಾಗುವುದು ಎಂದರು.
ಸರ್ಜಿಕಲ್ ದಾಳಿಗಳ ಕುರಿತು ಹೇಳಿಕೆಗಳಿಗಾಗಿ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿಯವರ ವಿರುದ್ಧ ವಾಗ್ದಾಳಿ ನಡೆಸಿದ ಶಾ,ಮೋದಿಯವರು ದಾಳಿಗಳನ್ನು ನಡೆಸಿ ಭಯೋತ್ಪಾದಕರನ್ನು ಮುಗಿಸಿದರು ಎಂದು ಹೇಳಿದರು.