ಪಹಲ್ಗಾಮ್ ಭಯೋತ್ಪಾದಕ ದಾಳಿ: ತಟಸ್ಥ - ಪಾರದರ್ಶಕ ತನಿಖೆಗೆ ಸಿದ್ಧ ಎಂದ ಪಾಕಿಸ್ತಾನ ಪ್ರಧಾನಿ

ಶೆಹಬಾಝ್ ಶರೀಫ್ (Photo: PTI)
ಇಸ್ಲಮಾಬಾದ್: 26 ಮಂದಿಯನ್ನು ಬಲಿ ಪಡೆದ ಇತ್ತೀಚಿನ ಜಮ್ಮು ಮತ್ತು ಕಾಶ್ಮೀರರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ತಟಸ್ಥ ತನಿಖೆಯಲ್ಲಿ ಭಾಗಿಯಾಗಲು ನಮ್ಮ ದೇಶ ಸಿದ್ಧ ಎಂದು ಶನಿವಾರ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ ಘೋಷಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶಹಬಾಝ್ ಶರೀಫ್, “ಒಂದು ಜವಾಬ್ದಾರಿಯುತ ದೇಶದ ಪಾತ್ರವನ್ನು ಮುಂದುವರಿಸುತ್ತಾ ಪಾಕಿಸ್ತಾನವು ಯಾವುದೇ ಬಗೆಯ ತಟಸ್ಥ, ಪಾರದರ್ಶಕ ಹಾಗೂ ವಿಶ್ವಾಸಾರ್ಹ ತನಿಖೆಯಲ್ಲಿ ಭಾಗಿಯಾಗಲು ಸಿದ್ಧ” ಎಂದು ಘೋಷಿಸಿದ್ದಾರೆ. ಈ ಹೇಳಿಕೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ಅವರು, ಯಾವುದೇ ಆರೋಪಗಳು ನಿಷ್ಪಕ್ಷಪಾತ ಪ್ರಕ್ರಿಯೆಗಳ ಮೂಲಕ ಸಾಕ್ಷ್ಯಾಧಾರಗಳ ಬೆಂಬಲವನ್ನು ಹೊಂದಿರಬೇಕು ಎಂದೂ ಅಭಿಪ್ರಾಯ ಪಟ್ಟಿದ್ದಾರೆ.
ಎಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಕಾರಣ ಎಂದು ಆರೋಪಿಸಿದ್ದ ಭಾರತ, ದಾಳಿಯ ಬೆನ್ನಿಗೇ ಪಾಕಿಸ್ತಾನಿ ಪ್ರಜೆಗಳ ವೀಸಾ ಅನುಮತಿಯನ್ನು ಹಿಂಪಡೆದು, ಅವರ ಭದ್ರತಾ ಶಿಷ್ಟಾಚಾರಗಳನ್ನು ಬಿಗಿಗೊಳಿಸಿದ ನಂತರ, ಪಾಕಿಸ್ತಾನ ಪ್ರಧಾನಿಯಿಂದ ಈ ಹೇಳಿಕೆ ಹೊರ ಬಿದ್ದಿದೆ.