ಕರಾಚಿ ಕರಾವಳಿಯಲ್ಲಿ ಕ್ಷಿಪಣಿ ಪರೀಕ್ಷೆ ನಡೆಸಲಿರುವ ಪಾಕಿಸ್ತಾನ; ಭಾರತದ ಹದ್ದಿನ ಕಣ್ಣು

ಸಾಂದರ್ಭಿಕ ಚಿತ್ರ (credit: Grok)
ಹೊಸದಿಲ್ಲಿ: ಪಾಕಿಸ್ತಾನವು ಎಪ್ರಿಲ್ 24-25 ರಂದು ತನ್ನ ವಿಶೇಷ ಆರ್ಥಿಕ ವಲಯದೊಳಗಿನ ಕರಾಚಿ ಕರಾವಳಿಯಲ್ಲಿ ಕ್ಷಿಪಣಿ ಪರೀಕ್ಷೆಯನ್ನು ನಡೆಸಲು ಅಧಿಸೂಚನೆಯನ್ನು ಹೊರಡಿಸಿದೆ ಎಂದು ರಕ್ಷಣಾ ಮೂಲಗಳನ್ನು ಉಲ್ಲೇಖಿಸಿ ANI ವರದಿ ಮಾಡಿದೆ.
ಈ ಬೆಳವಣಿಗೆಯ ಮೇಲೆ ಭಾರತವು ಹದ್ದಿನ ಕಣ್ಣಿಟ್ಟಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಉದ್ವಿಗ್ನವಾಗಿರುವ ಸಮಯದಲ್ಲಿ ಕ್ಷಿಪಣಿಯನ್ನು ಪರೀಕ್ಷಿಸುವ ಯೋಜನೆಗೆ ಪಾಕಿಸ್ತಾನವು ಕೈ ಹಾಕಿದೆ.
ಪುಲ್ವಾಮಾದಲ್ಲಿನ ದಾಳಿಯ ನಂತರ ಇದು ಭಾರತದ ಮೇಲಿನ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದೆ. ಈ ಹಿಂದೆ ದಾಳಿಯಾದಾಗ ಭಾರತವು ಬಾಲಕೋಟ್‌ನಲ್ಲಿ ವೈಮಾನಿಕ ದಾಳಿಯ ಮೂಲಕ ಪ್ರತಿಕ್ರಿಯಿಸಿತ್ತು. ಪ್ರಸ್ತುತ, ಮೋದಿ ಸರ್ಕಾರವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದೆ, ಅಟ್ಟಾರಿ ಗಡಿಯನ್ನು ಮುಚ್ಚಿದೆ ಮತ್ತು ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕನಿಷ್ಠ ಮಟ್ಟಕ್ಕೆ ಇಳಿಸಿದೆ.
ಭಾರತಕ್ಕೆ ಪ್ರತಿಕ್ರಿಯೆ ನೀಡುವುದನ್ನು ನಿರ್ಧರಿಸಲು ಪಾಕಿಸ್ತಾನ ಸಭೆಗಳನ್ನು ನಡೆಸಲು ಯೋಜಿಸಿದೆ. ಈ ಮಧ್ಯೆ ಸಚಿವರೊಬ್ಬರು ಭಾರತಕ್ಕೆ 'ಯಾವುದೇ ದುಸ್ಸಾಹಸವು ಭೀಕರ ಪರಿಣಾಮಗಳನ್ನು ಬೀರುತ್ತದೆ' ಎಂದು ಎಚ್ಚರಿಸಿದ್ದಾರೆ.
ಪಾಕಿಸ್ತಾನವು ಮಿಲಿಟರಿ ವಿಮಾನಗಳನ್ನು ಜಮ್ಮು ಕಾಶ್ಮೀರದ ಬಳಿಯ ನೆಲೆಗಳಿಗೆ ಸ್ಥಳಾಂತರಿಸುತ್ತಿದೆ ಎಂಬ ಸಾಮಾಜಿಕ ಮಾಧ್ಯಮಗಳ ವದಂತಿಗಳ ಬೆನ್ನಲ್ಲೇ ಕ್ಷಿಪಣಿ ಪರೀಕ್ಷೆಯ ಸುದ್ದಿಯೂ ಹೊರಬಂದಿದೆ.