ಪಂಜಾಬ್: ಯುವತಿಯ ಅಪಹರಣ, ಅತ್ಯಾಚಾರ ಆರೋಪ; ಪಾಸ್ಟರ್ ಸಹಿತ 13 ಮಂದಿ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ | PC : freepik.com
ಚಂಡಿಗಢ: ಇಪ್ಪತ್ತೆರೆಡು ವರ್ಷದ ಯುವತಿಯೋರ್ವರನ್ನು ಅಪಹರಿಸಿದ ಹಾಗೂ ಅತ್ಯಾಚಾರಗೈದ ಆರೋಪಕ್ಕೆ ಸಂಬಂಧಿಸಿ ಪಾಸ್ಟರ್ ಹಾಗೂ ಇತರ 12 ಮಂದಿಯ ವಿರುದ್ಧ ಗುರುದಾಸ್ ಪುರ ಜಿಲ್ಲೆಯ ದೇರಾ ಬಾಬಾ ನಾನಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಪಾಸ್ಟರ್ ಮಂಜಿತ್ ಸಿಂಗ್ ತನಗೆ ಥಳಿಸಿ ಮತಾಂತರಗೊಳ್ಳುವಂತೆ ಬಲವಂತಪಡಿಸಿದ್ದರು ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾವರ್ ಮಸೀಹ್ ತನ್ನ ಸೋದರ ಸಂಬಂಧಿ ನಾಪಿಂದರ್ ಸಿಂಗ್‌ನಿಂದ ತನ್ನ ಗುರುತುಪತ್ರವನ್ನು ಪಡೆದುಕೊಂಡಿದ್ದರು ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತನ್ನನ್ನು ಹಿಂಬಾಲಿಸಲು ಆರಂಭಿಸಿದ್ದರು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಜನವರಿ 19ರಂದು ಸಾವರ್ ಹಾಗೂ ಅವರ ಕುಟುಂಬದ ಸದಸ್ಯರು ತನ್ನನ್ನು ಮನೆಯಿಂದ ಅಪಹರಿಸಿದರು. ಹರಿತವಾದ ಆಯುಧ ತೋರಿಸಿ ಬೆದರಿಕೆ ಒಡ್ಡಿದರು. ಅನಂತರ ಅವರು ತನ್ನನ್ನು ಅಪರಿಚಿತ ಸ್ಥಳವೊಂದಕ್ಕೆ ಕರೆದೊಯ್ದರು. ಅಲ್ಲಿ ತನ್ನನ್ನು ಮೂರು ತಿಂಗಳುಗಳ ಕಾಲ ಇರಿಸಿದರು. ತನಗೆ ಪದಪದೇ ಥಳಿಸಿದರು ಹಾಗೂ ಅತ್ಯಾಚಾರ ಎಸಗಿದರು ಎಂದು ಅವರು ಆರೋಪಿಸಿದ್ದಾರೆ.
‘‘ನನ್ನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಪಾಸ್ಟರ್ ಮಂಜಿತ್ ಸಿಂಗ್ ಕೂಡ ಅಲ್ಲಿಗೆ ಆಗಮಿಸಿದ್ದರು ಹಾಗೂ ಬಲವಂತವಾಗಿ ನನಗೆ ಕುಡಿಯಲು ನೀರು ನೀಡಿದ್ದರು. ಅಲ್ಲದೆ, ಅವರು ನೀನು ಇನ್ನು ಹೆಚ್ಚು ಕಾಲ ಸಿಕ್ಖ್ ಆಗಿ ಇರುವುದಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಿ ಎಂದು ಹೇಳಿದ್ದರು. ಪಾಸ್ಟರ್ ಕೂಡ ನನಗೆ ಕಿರುಕುಳ ನೀಡಿದರು. ಸಾವರ್ ಮಸೀಹ್‌ನೊಂದಿಗೆ ಲೀವ್ ಇನ್ ರಿಲೇಶನ್‌ಶಿಪ್ ಇರುವುದಾಗಿ ಹಾಗೂ ಗರ್ಭವತಿಯಾಗಿರುವುದಾಗಿ ದಾಖಲೆಯೊಂದಕ್ಕೆ ನನ್ನಿಂದ ಬಲವಂತವಾಗಿ ಸಹಿ ಮಾಡಿಸಿಕೊಂಡರು’’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಸಾವರ್ ಹಾಗೂ ಆತನ ಕುಟುಂಬ ಹೊರಗಡೆ ಹೋದ, ಮನೆಯ ಬಾಗಿಲಿಗೆ ಬೀಗ ಹಾಕಲು ಮರೆತ ಹಿನ್ನೆಲೆಯಲ್ಲಿ ಎಪ್ರಿಲ್ 13ರಂದು ತಾನು ಅಲ್ಲಿಂದ ತಪ್ಪಿಸಿಕೊಂಡೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸರು ಕಲನೌರ್ ನ ನಿವಾಸಿಗಳಾದ ಪಾಸ್ಟರ್ ಮಂಜಿತ್ ಸಿಂಗ್, ಸಾವರ್ ಮಸೀಹ್, ಆತನ ತಂದೆ ಕಾಶ್ಮೀರ್ ಮಸೀಹ್, ಸಹೋದರಿಯರಾದ ಕಾಜಲ್ ರೀನಾ ಹಾಗೂ ಜೀನಾ, ಸಂತ್ರಸ್ತೆಯ ಸೋದರ ಸಂಬಂಧಿ ನಾಪಿಂದರ್ ಸಿಂಗ್, ಪರ್ವೇಝ್ ಮಸೀಹ್, ಹ್ಯಾಪಿ ಮಸೀಹಬ್, ಗುರುದಾಸ್‌ಪುರದ ಜಿಲ್ಲೆಯ ತಿಕ್ರಿವಾಲ್ ಗ್ರಾಮದ ನಿವಾಸಿಗಳಾದ ರಾಜಿಂದರ್ ಸಿಂಗ್ ಹಾಗೂ ರಿಮಿ ಹಾಗೂ ಇತರ
ಇಬ್ಬರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೇರಾ ಬಾಬಾ ನಾನಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಲವು ತಂಡಗಳನ್ನು ರೂಪಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.