ಶಿಂದೆಯನ್ನು ಪವಾರ್ ಸನ್ಮಾನಿಸಿರುವುದು ಉದ್ಧವ್ ಠಾಕ್ರೆಗಿಂತ ಶಿಂದೆ ಉತ್ತಮ ಮುಖ್ಯಮಂತ್ರಿಯಾಗಿದ್ದರು ಎಂಬುದಕ್ಕೆ ಪ್ರಮಾಣ ಪತ್ರ: ಸಚಿವ ಚಂದ್ರಶೇಖರ್ ಬವಾಂಕುಲೆ

Update: 2025-02-12 21:48 IST
Eknath Shinde

Credit: X/@PTI_News

  • whatsapp icon

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆಯನ್ನು ಎನ್ಸಿಪಿ (ಎಸ್ಪಿ) ವರಿಷ್ಠ ಶರದ್ ಪವಾರ್ ಸನ್ಮಾನಿಸಿರುವುದು ಉದ್ಧವ್ ಠಾಕ್ರೆಗಿಂತ ಏಕನಾಥ್ ಶಿಂದೆ ಉತ್ತಮ ಮುಖ್ಯಮಂತ್ರಿಯಾಗಿದ್ದರು ಎಂಬುದಕ್ಕೆ ಪ್ರಮಾಣ ಪತ್ರವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಕಂದಾಯ ಸಚಿವ ಚಂದ್ರಶೇಖರ್ ಬವಾಂಕುಲೆ ಅವರು ಶಿವಸೇನೆಗೆ ತಿರುಗೇಟು ನೀಡಿದ್ದಾರೆ.

ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ 98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ಎನ್ಸಿಪಿ (ಎಸ್ಪಿ) ವರಿಷ್ಠ ಶರದ್ ಪವಾರ್ ಅವರು ಮಹಾರಾಷ್ಟ್ರ ಉಪ ಮುಖ್ಯ್ಮಂತ್ರಿ ಏಕನಾಥ್ ಶಿಂದೆ ಅವರಿಗೆ ರಾಷ್ಟ್ರ ಗೌರವ್ ಪುರಸ್ಕಾರ್ ಅನ್ನು ಪ್ರದಾನ ಮಾಡಿ, ಸನ್ಮಾನಿಸಿದ್ದರು. ಈ ಕಾರ್ಯಕ್ರಮವನ್ನು ಪುಣೆ ಮೂಲದ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಯಾದ ಸರ್ಹದ್ ಆಯೋಜಿಸಿತ್ತು. ಇದರ ಬೆನ್ನಿಗೇ ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಹಾಗೂ ಉದ್ಧವ್ ಠಾಕ್ರೆ ನಿಕಟವರ್ತಿಯಾದ ಸಂಜಯ್ ರಾವತ್ ಅವರು ಶರದ್ ಪವಾರ್ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದರು.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಸಚಿವ ಚಂದ್ರಶೇಖರ್ ಬವಾಂಕುಲೆ, “ಎರಡೂವರೆ ವರ್ಷಗಳ ಕಾಲ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರೂ, ಅವರು ಸಚಿವಾಲಯಕ್ಕೆ ಕೇವಲ ಎರಡು ಬಾರಿ ಮಾತ್ರ ಭೇಟಿ ನೀಡಿದ್ದರು. ಆದರೆ, ಏಕನಾಥ್ ಶಿಂದೆ ತಾವು ಮುಖ್ಯುಮಂತ್ರಿಯಾಗಿದ್ದಾಗ, ದಿನಕ್ಕೆ 22 ಗಂಟೆಗಳ ಕಾಲ ಕೆಲಸ ಮಾಡಿದ್ದರು” ಎಂದು ಹೇಳಿದರು. ಅಲ್ಲದೆ, ಏಕನಾಥ್ ಶಿಂದೆಗೆ ಶರದ್ ಪವಾರ್ ಸನ್ಮಾನ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದೂ ಸಮರ್ಥಿಸಿಕೊಂಡರು.

ಇದಕ್ಕೂ ಮುನ್ನ, ಸಂಜಯ್ ರಾವತ್ ಟೀಕೆಯನ್ನು ಅವರ ಖಾಸಗಿ ಅಭಿಪ್ರಾಯ ಎಂದು ಹೇಳಿದ್ದ ಎನ್ಸಿಪಿ (ಎಸ್ಪಿ) ಸಂಸದ ಡಾ. ಅಮೋಲ್ ಕೊಹ್ಲೆ, ಶರದ್ ಪವಾರ್ ಅವರು ಏಕನಾಥ್ ಶಿಂದೆಯನ್ನು ಸನ್ಮಾನಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. “ಪವಾರ್ ಅವರು ಮುತ್ಸದ್ದಿತನವನ್ನು ಪ್ರದರ್ಶಿಸಿದ್ದು, ಇಂತಹ ಕಡೆ ಯಾರೂ ರಾಜಕೀಯವನ್ನು ತರಬಾರದು. ಅದರಲ್ಲಿ ಅಂಥ ತಪ್ಪಿತ್ತು ಎಂದು ನನಗನ್ನಿಸುತ್ತಿಲ್ಲ. ಅವರು ಆ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು” ಎಂದು ಅವರು ಸ್ಪಷ್ಟೀಕರಣ ನೀಡಿದ್ದರು.

ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿಯಲ್ಲಿ ಬಿರುಕು ಹೆಚ್ಚುತ್ತಲೇ ಇರುವುದರಿಂದ, ಅದರ ಭವಿಷ್ಯ ಡೋಲಾಯಮಾನವಾಗತೊಡಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಹೀನಾಯವಾಗಿ ಪರಾಭವಗೊಂಡ ನಂತರ, ಅದರೊಳಗಿನ ಭಿನ್ನಾಭಿಪ್ರಾಯ ತಾರಕಕ್ಕೇರಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News