ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಪ್ರಕರಣಗಳು: ಇತಿಹಾಸದಲ್ಲೇ ಗರಿಷ್ಠ

Update: 2024-08-30 01:59 GMT

ಹೊಸದಿಲ್ಲಿ: ಭಾರತದ ಸುಪ್ರೀಂಕೋರ್ಟ್ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸಿರುವುದು ಕೂಡಾ ಬಾಕಿ ಪ್ರಕರಣಗಳ ಮೇಲೆ ಯಾವುದೇ ಪರಿಣಾಮ ಬೀರುವಂತೆ ಕಾಣುತ್ತಿಲ್ಲ. ಬಾಕಿ ಪ್ರಕರಣಗಳ ಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಎಂಟು ಬಾರಿ ಹೆಚ್ಚಳವಾಗಿದ್ದು, ಕೇವಲ ಎರಡು ಬಾರಿ ಇಳಿಕೆಯಾಗಿದೆ. ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 83 ಸಾವಿರವನ್ನು ದಾಟಿದ್ದು, ಇದು ಇತಿಹಾಸದಲ್ಲೇ ಗರಿಷ್ಠ.

ಸುಪ್ರೀಂಕೋರ್ಟ್ನ ಅನುಮೋದಿತ ನ್ಯಾಯಮೂರ್ತಿಗಳ ಸಂಖ್ಯೆಯನ್ನು 2009ರಲ್ಲಿ 26ರಿಂದ 31ಕ್ಕೆ ಹೆಚ್ಚಿಸಿದರೂ, 2013ರ ವೇಳೆಗೆ ಪ್ರಕರಣಗಳ ಸಂಖ್ಯೆ 50 ಸಾವಿರದಿಂದ 66 ಸಾವಿರಕ್ಕೆ ಹೆಚ್ಚಿತು. ಬಳಿಕ ನ್ಯಾಯಮೂರ್ತಿ ಪಿ.ಸದಾಶಿವಂ ಮತ್ತು ಆರ್.ಎಂ.ಲೋಧಾ ಅವರ ಅವಧಿಯಲ್ಲಿ 2014ರಲ್ಲಿ ಪ್ರಕರಣಗಳ ಸಂಖ್ಯೆ 63 ಸಾವಿರಕ್ಕೆ ಇಳಿಯಿತು. ಮುಂದಿನ ಸಿಜೆಐ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ವಿಶೇಷ ಪರಿಶ್ರಮದಿಂದ 2015ರಲ್ಲಿ 59 ಸಾವಿರಕ್ಕೆ ಇಳಿಕೆಯಾಯಿತು.

ಮುಂದಿನ ಸಿಜೆಐ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರ ಅವಧಿಯಲ್ಲಿ ಇದು 63 ಸಾವಿರಕ್ಕೆ ಹೆಚ್ಚಿತು. ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರು ಕಾಗದರಹಿತ ನ್ಯಾಯಾಲಯ ವ್ಯವಸ್ಥೆಯನ್ನು ಪರಿಚಯಿಸಿದ ಹಿನ್ನೆಲೆಯಲ್ಲಿ ಪ್ರಕರಣ ನಿರ್ವಹಣೆ ವ್ಯವಸ್ಥೆಗೆ ಮಾಹಿತಿ ತಂತ್ರಜ್ಞಾನ ಬಳಕೆಯಿಂದ ಇದನ್ನು 56 ಸಾವಿರಕ್ಕೆ ಇಳಿಸಲಾಯಿತು. ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವಧಿಯಲ್ಲಿ ಮತ್ತೆ 57 ಸಾವಿರಕ್ಕೆ ಹೆಚ್ಚಳವಾಯಿತು.

ಸಂಸತ್ತಿನ ಕಾಯ್ದೆ ಮೂಲಕ 2019ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 31 ರಿಂದ 34ಕ್ಕೆ ಹೆಚ್ಚಿಸಲಾಯಿತು. ಆದಾಗ್ಯೂ ಪ್ರಕರಣ ಸಂಖ್ಯೆ 60 ಸಾವಿರ ದಾಟಿತು. ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಮುಂದಿನ ಸಿಜೆಐ ಆದ ಅವಧಿಯಲ್ಲಿ ಕೋವಿಡ್-19 ಸಾಂಕ್ರಾಮಿಕ, ನ್ಯಾಯದಾನ ವ್ಯವಸ್ಥೆ ಕೂಡಾ ಅಕ್ಷರಶಃ ಕುಂಟಲು ಕಾರಣವಾಯಿತು. ಬಾಕಿ ಪ್ರಕರಣಗಳ ಸಂಖ್ಯೆ 65 ಸಾವಿರವನ್ನು ಮೀರಿತು.

ಸಿಜೆಐ ಎನ್.ವಿ.ರಮಣ ಅವರ ಅವಧಿಯಲ್ಲಿ ಇದು 70 ಸಾವಿರಕ್ಕೇರಿದರೆ, 2022ರ ಕೊನೆಗೆ 79 ಸಾವಿರವನ್ನು ತಲುಪಿತು. ಈ ವೇಳೆ ನ್ಯಾಯಮೂರ್ತಿ ರಮಣಾ ಮತ್ತು ಯು.ಯು.ಲಲಿತ್ ನಿವೃತ್ತರಾಗಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸಿಜೆಐ ಆದರು. ಇದೀಗ ಕಳೆದ ಎರಡು ವರ್ಷಗಳಲ್ಲಿ ಪ್ರಕರಣಗಳ ಸಂಖ್ಯೆ 4 ಸಾವಿರದಷ್ಟು ಹೆಚ್ಚಿ 83 ಸಾವಿರ ತಲುಪಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News