ವಕ್ಪ್ ತಿದ್ದುಪಡಿ ಕಾಯ್ದೆಯ ಮಾನ್ಯತೆ ಪ್ರಶ್ನಿಸಿ ಅರ್ಜಿ; ಎಪ್ರಿಲ್ 16ರಂದು ಸುಪ್ರೀಂ ಕೋರ್ಟ್ ನಿಂದ ವಿಚಾರಣೆ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸಲ್ಲಿಸಿದ ಅರ್ಜಿ ಸೇರಿದಂತೆ 10ಕ್ಕೂ ಅಧಿಕ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಸುಪ್ರೀಂ ಕೋರ್ಟ್ ನ ಪೀಠ ಎಪ್ರಿಲ್ 16ರಂದು ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಲ್ಲದೆ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ.ವಿ. ವಿಶ್ವನಾಥನ್ ಅವರು ಅರ್ಜಿಗಳ ವಿಚಾರಣೆ ನಡೆಸಲಿರುವ ಮೂವರು ಸದಸ್ಯರ ಪೀಠದ ಭಾಗವಾಗಿರಲಿದ್ದಾರೆ.
ಎಐಎಂಪಿಎಲ್‌ಬಿ ಅರ್ಜಿಯ ಜೊತೆಗೆ ನ್ಯಾಯಾಲಯ ಆಫ್ ನಾಯಕ ಅಮಾನತುಲ್ಲಾ ಖಾನ್, ಅಸೋಸಿಯೇಟ್ ಫಾರ್ ದ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್, ಅರ್ಶದ್ ಮದನಿ, ಸಮಸ್ತ ಕೇರಳ ಜಮೀಯತುಲ್ ಉಲಮಾ, ಅಂಜುಂ ಕಡಾರಿ, ತೆಯ್ಯಿಬ್ ಖಾನ್ ಸಲ್ಮಾನಿ, ಮುಹಮ್ಮದ್ ಶಾಫಿ, ಮುಹಮ್ಮದ್ ಫಜ್ಲುರ್ರಹೀಂ ಹಾಗೂ ಆರ್ ಜೆ ಡಿ ಮನೋಜ್ ಕುಮಾರ್ ಝಾ ಅವರು ಸಲ್ಲಿಸಿದ ಅರ್ಜಿಗಳ ವಿಚಾರಣೆಗೆ ಪಟ್ಟಿ ಮಾಡಲಿದೆ.
ಇತರ ಕೆಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನ ರಿಜಿಸ್ಟ್ರಿ ಪೀಠದ ಮುಂದೆ ಇನ್ನಷ್ಟೇ ಪಟ್ಟಿ ಮಾಡಬೇಕಿದೆ. ಜಮೀಯತ್ ಉಲಮಾ ಎ ಹಿಂದ್, ದ್ರಾವಿಡ ಮುನ್ನೆತ್ರ ಕಳಗಂ (ಡಿಎಂಕೆ), ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ ಗಢಿ ಹಾಗೂ ಮುಹಮ್ಮದ್ ಜಾವೇದ್ ಇತರ ಪ್ರಮುಖ ಅರ್ಜಿದಾರರು.
ಅರ್ಜಿಗಳನ್ನು ಪಟ್ಟಿ ಮಾಡಲು ಪರಿಗಣಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಜಮೀಯತುಲ್ ಉಲಮಾ ಎ ಹಿಂದ್ ನ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರಿಗೆ ಎಪ್ರಿಲ್ 7ರಂದು ಭರವಸೆ ನೀಡಿತ್ತು.
ಈ ಅರ್ಜಿಗಳ ಸಲ್ಲಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಎಪ್ರಿಲ್ 8ರಂದು ಕೇವಿಯಟ್ ಸಲ್ಲಿಸಿದೆ ಹಾಗೂ ಈ ವಿಷಯದ ಕುರಿತಂತೆ ಯಾವುದೇ ಆದೇಶ ನೀಡುವ ಮುನ್ನ ತಮ್ಮನ್ನು ಆಲಿಸುವಂತೆ ಕೋರಿದೆ.
ಸಂಸತ್ತಿನ ಉಭಯ ಸದನದಲ್ಲಿ ಅಂಗೀಕಾರಗೊಂಡ ವಕ್ಫ್ (ತಿದ್ದುಪಡಿ) ಕಾಯ್ದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಪ್ರಿಲ್ 5ರಂದು ಅಂಕಿತ ಹಾಕಿದ್ದರು. ಈ ಕಾಯ್ದೆಯ ಕುರಿತು ಕೇಂದ್ರ ಸರಕಾರ ಮಂಗಳವಾರ ಅಧಿಸೂಚನೆ ಹೊರಡಿಸಿತ್ತು.