ಪ್ರಧಾನಿ ಮೋದಿ ಉದ್ಘಾಟಿಸಿದ್ದು ನೂತನ ಕಟ್ಟಡ, ಈಗ ಕುಸಿದು ಬಿದ್ದಿರುವುದು ಹಳೆಯ ಕಟ್ಟಡ: ವಿಮಾನ ನಿಲ್ದಾಣ ಮೇಲ್ಚಾವಣಿ ಕುಸಿತದ ಕುರಿತು ಕೇಂದ್ರ ಸಚಿವರ ಪ್ರತಿಕ್ರಿಯೆ

Update: 2024-06-28 06:06 GMT

Screengrab:X/ANI

ಹೊಸದಿಲ್ಲಿ: "ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಕಟ್ಟಡ ಮತ್ತೊಂದು ಬದಿಯಲ್ಲಿದ್ದು, ಈಗ ಕುಸಿದು ಬಿದ್ದಿರುವ ಕಟ್ಟಡವು ಹಳೆಯ ಕಟ್ಟಡವಾಗಿದೆ. ಈ ಕಟ್ಟಡವು 2009ರಲ್ಲಿ ಉದ್ಘಾಟನೆಗೊಂಡಿತ್ತು" ಎಂದು ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಹೇಳಿದ್ದಾರೆ.

ಇಂದು ಬೆಳಗ್ಗೆ ಸುರಿದ ಭಾರಿ ಮಳೆಗೆ ದಿಲ್ಲಿ ವಿಮಾನ ನಿಲ್ದಾಣದ ಒಂದನೇ ಟರ್ಮಿನಲ್ ನ ಮೇಲ್ಚಾವಣಿ ಕುಸಿದು ಬಿದ್ದಿದ್ದರಿಂದ, ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು. ಘಟನೆಯ ಕುರಿತು ಪ್ರತಿಕ್ರಿಯಿಸಿದ್ದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಈಗ ಕುಸಿದು ಬಿದ್ದಿರುವ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ ತಿಂಗಳಲ್ಲಿ ಉದ್ಘಾಟಿಸಿದ್ದರು ಎಂದು ಆರೋಪಿಸಿತ್ತು.‌ಇದರ ಬೆನ್ನಿಗೇ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ನಾಯ್ಡು ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ.

ಸರಕಾರಿ ಮೂಲಗಳ ಪ್ರಕಾರ, ಹಾನಿಗೊಳಗಾಗಿರುವ ಮೇಲ್ಚಾವಣಿ ನಿರ್ಮಾಣದ ಹೊಣೆಯನ್ನು ಜಿಎಂಆರ್ ಏರ್‌ಪೋರ್ಟ್ಸ್ ಲಿಮಿಟೆಡ್ ಮತ್ತೊಂದು ಸಂಸ್ಥೆಗೆ ಹೊರ ಗುತ್ತಿಗೆ ನೀಡಿತ್ತು ಎನ್ನಲಾಗಿದೆ.

ಈ ನಡುವೆ, ಘಟನೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ರೂ. 20 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ಮೂರು ಲಕ್ಷ ಪರಿಹಾರವನ್ನು ಕೇಂದ್ರ ನಾಗರಿಕ ವಿಮಾನ ಯಾನ ಸಚಿವಾಲಯ ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News