ವಾರಣಾಸಿಯಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಕಠಿಣ ಕ್ರಮಕ್ಕೆ ಸೂಚಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ (Photo: PTI)
ವಾರಣಾಸಿ: ಶುಕ್ರವಾರ ಬೆಳಗ್ಗೆ ತಮ್ಮ ಸ್ವಕ್ಷೇತ್ರವಾದ ವಾರಣಾಸಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಕ್ಷೇತ್ರದಲ್ಲಿ ನಡೆದ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ, ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಉತ್ತರ ಪ್ರದೇಶ ಸರಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ವಾರಾಣಸಿಗೆ ಬಂದಿಳಿಯುತ್ತಿದ್ದಂತೆಯೆ, ಇತ್ತೀಚೆಗೆ ನಗರದಲ್ಲಿ ನಡೆದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯ ಕುರಿತು ಪೊಲೀಸ್ ಆಯುಕ್ತರು, ವಿಭಾಗೀಯ ಆಯುಕ್ತರು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ವಿವರ ನೀಡಿದರು. ನಂತರ, ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಸಂತ್ರಸ್ತ ಯುವತಿಯನ್ನು ಪುಸಲಾಯಿಸಿ ಹೋಟೆಲ್ ಗೆ ಕರೆದೊಯ್ದಿದ್ದ ಆಕೆಯ ಸ್ನೇಹಿತನೊಬ್ಬ, ಆಕೆಗೆ ಮಾದಕ ದ್ರವ್ಯ ನೀಡಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ, ತನ್ನ ಕೆಲವು ಸ್ನೇಹಿತರನ್ನೂ ಹೋಟೆಲ್ ಗೆ ಕರೆಸಿಕೊಂಡಿದ್ದ ಆತ, ಅವರಿಂದಲೂ ಆಕೆಯ ಮೇಲೆ ಅತ್ಯಾಚಾರ ಕೃತ್ಯವೆಸಗಿಸಿದ್ದ. ಆರು ದಿನಗಳ ಕಾಲ ನಗರದ ವಿವಿಧ ಸ್ಥಳಗಳಲ್ಲಿನ ಹೋಟೆಲ್ ಗಳಿಗೆ ಸಂತ್ರಸ್ತೆಯನ್ನು ಸ್ಥಳಾಂತರಿಸಿದ್ದ ಆರೋಪಿಗಳು, ಆಕೆಯ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಸಂತ್ರಸ್ತೆಯ ತಾಯಿಯು ನೀಡಿದ್ದ ನಾಪತ್ತೆ ದೂರನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡ ನಂತರ, ಈ ಸಾಮೂಹಿಕ ಅತ್ಯಾಚಾರದ ಘಟನೆ ಬೆಳಕಿಗೆ ಬಂದಿತ್ತು.
ಈ ಸಂಬಂಧ, ಸೋಮವಾರ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.