ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಕಾನ್ಪುರ ಭೇಟಿ ರದ್ದು; ಚುನಾವಣೆಯ ಹೊಸ್ತಿಲಲ್ಲಿರುವ ಬಿಹಾರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

Photo credit: ANI
ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಎಪ್ರಿಲ್ 24 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಚುನಾವಣೆಗೆ ಸಜ್ಜಾಗಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ.
"ಕಾನ್ಪುರದ ಧೈರ್ಯಶಾಲಿ ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮತ್ತು ಜನರ ದುಃಖಿತ ಮನಸ್ಥಿತಿ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ" ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ಆಲ್ ಇಂಡಿಯಾ ರೇಡಿಯೋ ವರದಿ ಮಾಡಿತ್ತು.
ಪ್ರಧಾನಿ ಕಾನ್ಪುರದಲ್ಲಿ 20 ಸಾವಿರ ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಬೇಕಿತ್ತು ಎಂದು ತಿಳಿದು ಬಂದಿದೆ.
ಪ್ರಧಾನಿ ಮೋದಿಯವರು ಕಾನ್ಪುರ ಭೇಟಿ ರದ್ದುಗೊಳಿಸಿ, ಬಿಹಾರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು 13,480 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
ಇಂದು ನಿಗದಿಯಾಗಿರುವ ಸರ್ವಪಕ್ಷ ಸಭೆಯಲ್ಲಿ ಮೋದಿ ಭಾಗವಹಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.