ಇಸ್ರೋ ಗೆ ಮಹತ್ವಾಕಾಂಕ್ಷೆಯ ಗುರಿಗಳನ್ನು ನೀಡಿದ ಪ್ರಧಾನಿ ಮೋದಿ
ಹೊಸದಿಲ್ಲಿ : 2025ರ ವೇಳೆಗೆ ಮಾನವ ಸಹಿತ ಬಾಹ್ಯಾಕಾಶ ಯಾನ, 2035ರ ಹೊತ್ತಿಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣದ ಸ್ಥಾಪನೆ ಮತ್ತು 2040ರ ವೇಳೆಗೆ ಚಂದ್ರನ ಮೇಲೆ ಮೊದಲ ಭಾರತೀಯನ ರವಾನೆ, ಇವು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋಕ್ಕೆ ನೀಡಿರುವ ಮಹತ್ವಾಕಾಂಕ್ಷೆಯ ಗುರಿಗಳು.
ಇಸ್ರೋದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೋದಿಯವರು ಈ ನಿರ್ದೇಶನಗಳನ್ನು ನೀಡಿದರು. ಸಭೆಯಲ್ಲಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ ಅವರು ಗಗನಯಾನ ಅಭಿಯಾನದ ಪ್ರಗತಿಯ ಕುರಿತು ಪ್ರಧಾನಿಯವರಿಗೆ ಮಾಹಿತಿಗಳನ್ನು ಒದಗಿಸಿದರು.
ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನವು 2025ರಲ್ಲಿ ನಡೆಯಲಿದೆ ಎಂದು ಈಗ ನಿರೀಕ್ಷಿಸಲಾಗಿದೆ ಎಂದು ಸಭೆಯ ಬಳಿಕ ಪ್ರಧಾನಿ ಕಚೇರಿ (ಪಿಎಂಒ)ಯು ಹೇಳಿಕೆಯಲ್ಲಿ ತಿಳಿಸಿದೆ.
ಸಭೆಯಲ್ಲಿ ಭಾರತದ ಬಾಹ್ಯಾಕಾಶ ಅನ್ವೇಷಣೆ ಪ್ರಯತ್ನಗಳ ಭವಿಷ್ಯದ ಕುರಿತು ಮಾತನಾಡಿದ ಮೋದಿ, ಶುಕ್ರ ಕಕ್ಷೆಗಾಮಿ ಅಭಿಯಾನ ಮತ್ತು ಮಂಗಳಗ್ರಹದಲ್ಲಿ ಲ್ಯಾಂಡರ್ ಇಳಿಸುವುದು ಸೇರಿದಂತೆ ಅಂತರ್‌ಗ್ರಹ ಕಾರ್ಯಾಚರಣೆಗಳು ಮತ್ತು ಚಂದ್ರನ ಇನ್ನಷ್ಟು ವಿವರವಾದ ಅನ್ವೇಷಣೆಯ ಕುರಿತು ಶ್ರಮಿಸುವಂತೆ ವಿಜ್ಞಾನಿಗಳನ್ನು ಆಗ್ರಹಿಸಿದರು.
ಇತ್ತೀಚಿನ ಚಂದ್ರಯಾನ-3 ಮತ್ತು ಆದಿತ್ಯ ಎಲ್1 ಅಭಿಯಾನಗಳು ಸೇರಿದಂತೆ ಇಸ್ರೋದ ಬಾಹ್ಯಾಕಾಶ ಉಪಕ್ರಮಗಳ ಯಶಸ್ಸನ್ನು ಮೆಟ್ಟಿಲಾಗಿಸಿಕೊಂಡು 2035ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣದ ಸ್ಥಾಪನೆ ಮತ್ತು 2040ರ ಹೊತ್ತಿಗೆ ಚಂದ್ರನ ಮೇಲೆ ಮೊದಲ ಭಾರತೀಯನ ರವಾನೆ ಸೇರಿದಂತೆ ನೂತನ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಭಾರತವು ಈಗ ಹೊಂದಬೇಕಿದೆ ಎಂದು ಪ್ರಧಾನಿ ನಿರ್ದೇಶ ನೀಡಿದ್ದಾರೆ. ಈ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ಇಲಾಖೆಯು ಚಂದ್ರನ ಅನ್ವೇಷಣೆಗಾಗಿ ಮಾರ್ಗಸೂಚಿಯೊಂದನ್ನು ರೂಪಿಸಲಿದೆ ಎಂದು ಪಿಎಂಒ ಹೇಳಿಕೆಯು ತಿಳಿಸಿದೆ.
ಇಸ್ರೋದ ಚಂದ್ರ ಅನ್ವೇಷಣೆ ಯೋಜನೆಗಳು ಸರಣಿ ಚಂದ್ರಯಾನ ಅಭಿಯಾನಗಳು, ಮುಂದಿನ ಪೀಳಿಗೆಯ ಉಡಾವಣಾ ವಾಹನದ ಅಭಿವೃದ್ಧಿ, ನೂತನ ಲಾಂಚ್‌ಪ್ಯಾಡ್ ನಿರ್ಮಾಣ ಹಾಗೂ ಮಾನವ ಕೇಂದ್ರಿತ ಪ್ರಯೋಗಾಲಯಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳ ಸ್ಥಾಪನೆಗಳನ್ನು ಒಳಗೊಂಡಿವೆ.
ಪ್ರಧಾನಿಯವರು ಭಾರತದ ಸಾಮರ್ಥ್ಯಗಳಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸಿದರು ಮತ್ತು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಎತ್ತರಕ್ಕೇರುವ ದೇಶದ ಬದ್ಧತೆಯನ್ನು ದೃಢಪಡಿಸಿದರು ಎಂದೂ ಹೇಳಿಕೆಯು ತಿಳಿಸಿದೆ.
ಭೂಮಿಯ ಕೆಳಮಟ್ಟದ ಕಕ್ಷೆಗೆ ಇಬ್ಬರು ಗಗನಯಾನಿಗಳ ರವಾನೆಯನ್ನು ಒಳಗೊಂಡಿರುವ ಗಗನಯಾನ ಅಭಿಯಾನವನ್ನು 2022ರಲ್ಲಿ ಕೈಗೊಳ್ಳಲು ಯೋಜಿಸಲಾಗಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ಮತ್ತು ಅಭಿಯಾನದ ಸಂಕೀರ್ಣತೆಯು ವಿಳಂಬಕ್ಕೆ ಕಾರಣವಾಗಿದ್ದು, 2024ರ ಉತ್ತರಾರ್ಧದಲ್ಲಿ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಮಂಗಳವಾರದ ಸಭೆಯಿಂದ ಈಗ ಗಗನಯಾನ ಅಭಿಯಾನವು 2025ರಲ್ಲಿ ನಡೆಯಲಿದೆ ಎನ್ನುವುದು ಹೊರಹೊಮ್ಮಿದೆ.