ಸೌದಿಗೆ ಬಂದಿಳಿದ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ; ಸೀಮಾತೀತ ಬಾಂಧ್ಯವದ ಕುರಿತ ಮಾತುಕತೆಗೆ ಕ್ಷಣಗಣನೆ

ಜಿದ್ದಾ (ಸೌದಿ ಅರೇಬಿಯ): ಅತ್ಯಂತ ಮಹತ್ವದ್ದಾಗಿರುವ ಸೌದಿ ಅರೇಬಿಯ ಭೇಟಿಯ ಭಾಗವಾಗಿ ಮಂಗಳವಾರ ಜಿದ್ದಾಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಹಲವು ಸೌದಿ ವಾಯು ಪಡೆಯ ಎಫ್-15 ಫೈಟರ್ ಜೆಟ್ ವಿಮಾನಗಳು ಸಾಂಕೇತಿಕ ಗೌರವ ವಂದನೆ ನೀಡುವ ಮೂಲಕ, ಆಪ್ತ ವ್ಯೂಹಾತ್ಮಕ ಪಾಲುದಾರ ದೇಶದ ನಾಯಕನನ್ನು ಆತ್ಮೀಯವಾಗಿ ಸ್ವಾಗತಿಸಿದವು.
ಪ್ರಧಾನಿ ನರೇಂದ್ರ ಮೊದಿ ಏರ್ ಇಂಡಿಯಾ ಒನ್ ವಿಮಾನದಿಂದ ಕೆಳಗಿಳಿಯುತ್ತಿದ್ದಂತೆಯೆ, ಅವರಿಗೆ 21 ಗನ್ ಗಳಿಂದ ಕುಶಾಲು ತೋಪು ಸಿಡಿಸುವ ಗೌರವ ವಂದನೆ ಸಲ್ಲಿಸಲಾಯಿತು. ಈ ವೇಳೆ ಭಾರತೀಯ ಸಮುದಾಯದವರು “ಸಾರೇ ಜಹಾಂನ್ ಸೆ ಅಚ್ಛಾ” ಎಂಬ ಗೀತೆಯನ್ನು ಹಾಡಿದರು.
ಪ್ರಧಾನಿ ನರೇಂದ್ರ ಮೋದಿ, ಸೌದಿ ಅರೇಬಿಯದ ರಾಜಕುಮಾರ್ ಮುಹಮ್ಮದ್ ಬಿನ್ ಸಲ್ಮಾನ್ ರನ್ನು ‘ಸಹೋದರ’ ಎಂಬ ಶ್ಲಾಘಿಸಿದರು. ನಂತರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಸೌದಿ ಅರೇಬಿಯದ ಜಿದ್ದಾಗೆ ಬಂದಿಳಿದಿದ್ದೇನೆ. ಈ ಭೇಟಿಯು ಭಾರತ ಮತ್ತು ಸೌದಿ ಅರೇಬಿಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ. ಇಂದು ಮತ್ತು ನಾಳೆ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕಾತುರನಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ನಂತರ, Arab News ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಪ್ರಧಾನಿ ಮೋದಿ, “ಸೌದಿ ಅರೇಬಿಯ ಭಾರತದ ವಿಶ್ವಾಸಾರ್ಹ ಸ್ನೇಹಿತ, ವ್ಯೂಹಾತ್ಮಕ ಪಾಲುದಾರ ಹಾಗೂ ತೀರಾ ಮೌಲ್ಯಯುತ ಪಾಲುದಾರನಾಗಿದೆ” ಎಂದು ಬಣ್ಣಿಸಿದ್ದಾರೆ. ಅಲ್ಲದೆ, “ಭಾರತ ಮತ್ತು ಸೌದಿ ಅರೇಬಿಯದ ಪಾಲುದಾರಿಕೆ ಸೀಮಾತೀತ ಸಾಮರ್ಥ್ಯ ಮತ್ತು ಸಾಧ್ಯತೆಯನ್ನು ಹೊಂದಿದೆ” ಎಂದೂ ಹೇಳಿದ್ದಾರೆ.
ಭಾರತ ಮತ್ತು ಸೌದಿ ಅರೇಬಿಯದ ನಡುವಿನ ದ್ವಿಪಕ್ಷೀಯ ಮತ್ತು ವ್ಯೂಹಾತ್ಮಕ ಬಾಂಧವ್ಯವನ್ನು ಬಲಿಷ್ಠಗೊಳಿಸುವ ಗುರಿಯೊಂದಿಗೆ 2019ರ ಪ್ರಧಾನಿ ನರೇಂದ್ರ ಮೋದಿಯ ಸೌದಿ ಅರೇಬಿಯ ಭೇಟಿಯ ವೇಳೆ ಸ್ಥಾಪನೆಯಾಗಿದ್ದ ಸೌದಿ ಅರೇಬಿಯ-ಭಾರತ ಪಾಲುದಾರಿಕೆ ಮಂಡಳಿಯ ಎರಡನೆ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸೌದಿ ಅರೇಬಿಯದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಜಂಟಿಯಾಗಿ ವಹಿಸಲಿದ್ದಾರೆ.
ಈ ಸಭೆಯ ವೇಳೆ, ರಕ್ಷಣೆ ಮತ್ತು ಬಾಹ್ಯಾಕಾಶ, ಇಂಧನ, ಆರೋಗ್ಯ, ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆ, ಸಂಸ್ಕೃತಿ ಹಾಗೂ ಸುಧಾರಿತ ತಂತ್ರಜ್ಞಾನ ವಲಯಗಳಲ್ಲಿ ಆರು ಪ್ರಮುಖ ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸೌದಿ ಅರೇಬಿಯದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಸಹಿ ಹಾಕಲಿದ್ದಾರೆ. ನಂತರ ನಡೆಯಲಿರುವ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತದಲ್ಲಿನ ಹೂಡಿಕೆ ಅವಕಾಶಗಳ ಸಾಧ್ಯತೆ ಹಾಗೂ ಎರಡು ದೇಶಗಳ ನಡುವಿನ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಗಳ ಬಲವರ್ಧನೆಯ ಕುರಿತೂ ಚರ್ಚೆ ನಡೆಸಲಿದ್ದಾರೆ.
ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಹಜ್ ಯಾತ್ರಾರ್ಥಿಗಳ ವಿಷಯದ ಕುರಿತೂ ಚರ್ಚಿಸಲಿದ್ದು, ಭಾರತದ ಯಾತ್ರಾರ್ಥಿಗಳಿಗೆ ಅಧಿಕ ಪ್ರಮಾಣದ ಕೋಟಾ ನಿಗದಿಗೊಳಿಸುವಂತೆಯೂ ಮನವಿ ಮಾಡಲಿದ್ದಾರೆ ಎಂದು ವರದಿಯಾಗಿದೆ.