ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಪಂಜಾಬ್ ಗಾಯಕ ದಿಲ್ಜಿತ್ ದೋಸಾಂಜ್

Update: 2025-01-02 12:39 IST
Photo of narendra Modi and DILJIT DOSANJH

Photo: X/@diljitdosanjh

  • whatsapp icon

ಹೊಸದಿಲ್ಲಿ: ರೈತರ ಬೃಹತ್ ಪ್ರತಿಭಟನೆಯನ್ನು ಬೆಂಬಲಿಸುವ ಮೂಲಕ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಪಂಜಾಬ್ ಗಾಯಕ, ನಟ ದಿಲ್ಜಿತ್ ದೋಸಾಂಜ್ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದು, ಈ ವೇಳೆ ಸಂಗೀತ, ಸಂಸ್ಕೃತಿ ಮತ್ತು ಯೋಗ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಪರಸ್ಪರ ಮಾತುಕತೆಯನ್ನು ನಡೆಸಿದ್ದಾರೆ.

ದಿಲ್ಜಿತ್ ಅವರೊಂದಿಗಿನ ಸಂವಾದದ ವಿಡಿಯೊ ತುಣುಕನ್ನು ಇನ್ ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ‘ದಿಲ್ಜಿತ್ ದೋಸಾಂಜ್ʼ ಅವರೊಂದಿಗೆ ಉತ್ತಮ ಸಂವಾದ ನಡೆಸಲಾಯಿತು. ಅವರು ನಿಜವಾಗಿಯೂ ಬಹುಮುಖಿಯಾಗಿದ್ದಾರೆ. ತಳಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವಲ್ಲಿನ ಅವರ ಶ್ರಮ ಮತ್ತು ಬೆಳವಣಿಗೆ ಶ್ಲಾಘನೀಯ’ ಎಂದು ಪ್ರಧಾನಿ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಭೆಯ ನಂತರ ದಿಲ್ಜಿತ್ ದೋಸಾಂಜ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, 2025ಕ್ಕೆ ಅದ್ಭುತ ಆರಂಭ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಬಹಳ ಸ್ಮರಣೀಯ ಭೇಟಿ, ನಾವು ಸಂಗೀತ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ದಿಲ್ಜಿತ್ ಅವರ ಸಾಧನೆಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಹಿಂದೂಸ್ತಾನದ ಸಣ್ಣ ಹಳ್ಳಿಯೊಂದರ ಹುಡುಗ ಜಾಗತಿಕ ವೇದಿಕೆಯಲ್ಲಿ ಮಿಂಚಿದಾಗ ಸಂತೋಷವಾಗುತ್ತಿದೆ. ನಿಮ್ಮ ಕುಟುಂಬವು ನಿಮಗೆ ದಿಲ್ಜಿತ್ ಎಂದು ಹೆಸರಿಸಿದೆ, ಆದ್ದರಿಂದ ನೀವು ಎಲ್ಲರ ಹೃದಯವನ್ನು ಗೆಲ್ಲುತ್ತಿದ್ದೀರಿ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್ ರೈತರು ನಡೆಸಿದ್ದ ಬೃಹತ್ ಪ್ರತಿಭಟನೆಯನ್ನು ಬೆಂಬಲಿಸುವ ಮೂಲಕ ದಿಲ್ಜಿತ್ ದೋಸಾಂಜ್ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಿಜೆಪಿ, ಬಲಪಂಥಿಯರ ಟೀಕೆಗೆ ಗುರಿಯಾಗಿದ್ದ ಗಾಯಕ ದಿಲ್ಜಿತ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದಿಲ್ಜಿತ್ ದೋಸಾಂಜ್ ಮಂಗಳವಾರ ಲುಧಿಯಾನದಲ್ಲಿ ತಮ್ಮ “ದಿಲ್-ಲುಮಿನಾಟಿ ಇಂಡಿಯಾ ಟೂರ್” ಅನ್ನು ಮುಕ್ತಾಯಗೊಳಿಸಿದ್ದರು. ಅಕ್ಟೋಬರ್ 26ರಂದು ರಾಷ್ಟ್ರ ರಾಜಧಾನಿಯಲ್ಲಿ ಪ್ರಾರಂಭವಾದ ಗಾಯಕನ ಎರಡು ತಿಂಗಳ ರಾಷ್ಟ್ರವ್ಯಾಪಿ ಪ್ರವಾಸ ಹೊಸ ವರ್ಷದ ಮುನ್ನಾದಿನದಂದು ಪಂಜಾಬ್ ಅಗ್ರಿಕಲ್ಚರ್ ಯೂನಿವರ್ಸಿಟಿ ಮೈದಾನದಲ್ಲಿ ಸಮಾಪ್ತಿಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News