ಲಾಲು ಯಾದವ್‌ ಟೀಕೆಯ ಬೆನ್ನಲ್ಲೇ ʼಮೋದಿ ಕಾ ಪರಿವಾರ್ʼ ಆನ್‌ಲೈನ್‌ ಅಭಿಯಾನ ಆರಂಭಿಸಿದ ಬಿಜೆಪಿ

Update: 2024-03-04 09:42 GMT

ಹೊಸದಿಲ್ಲಿ: ಆರ್‌ಜೆಡಿ ಅಧ್ಯಕ್ಷ ಲಾಲು ಯಾದವ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ “ಪರಿವಾರವಾದ” ಆರೋಪ ಹೊರಿಸಿದ್ದಕ್ಕೆ ಪ್ರತಿಯಾಗಿ ಬಿಜೆಪಿ ಇಂದು “ಮೋದಿ ಕಾ ಪರಿವಾರ್” ಎಂಬ ಆನ್‌ಲೈನ್‌ ಅಭಿಯಾನ ಆರಂಭಿಸಿದೆ. ಈ ಅಭಿಯಾನದಂಗವಾಗಿ ಅಮಿತ್‌ ಶಾ, ಜೆಪಿ ನಡ್ಡಾ ಸಹಿತ ಪ್ರಮುಖ ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಬಯೋ ಬದಲಾಯಿಸಿದ್ದಾರೆ ಹಾಗೂ ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಎಕ್ಸ್‌ನಲ್ಲಿ ತಮ್ಮ ಹೆಸರುಗಳ ಜೊತೆಗೆ ʼಮೋದಿ ಕಾ ಪರಿವಾರ್‌ʼ ಎಂಬ ಪದಗಳನ್ನೂ ಕೇಂದ್ರ ಸಚಿವರಾದ ಅಮಿತ್‌ ಶಾ, ಅನುರಾಗ್‌ ಠಾಕುರ್‌ ಹಾಗೂ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಸೇರಿಸಿದ್ದಾರೆ.

ರವಿವಾರ ವಿಪಕ್ಷ ಮಹಾಮೈತ್ರಿಯ ಜನ ವಿಶ್ವಾಸ ರ್ಯಾಲಿ ಪಾಟ್ನಾದಲ್ಲಿ ನಡೆದಾಗ ಮಾತನಾಡಿದ್ದ ಲಾಲು ಯಾದವ್‌ ಅವರು ಮೋದಿ ವಿರುದ್ಧ ಕಿಡಿಕಾರಿದ್ದರು. “ನರೇಂದ್ರ ಮೋದಿಗೆ ಸ್ವಂತ ಕುಟುಂಬವಿಲ್ಲ ಎಂಬ ಕಾರಣಕ್ಕೆ ನಾವೇನು ಮಾಡಬೇಕು? ಅವರು ಸದಾ ರಾಮ ಮಂದಿರದ ಬಗ್ಗೆ ಮಾತನಾಡುತ್ತಾರೆ. ನೈಜ ಹಿಂದು ಸಹ ಅವರಲ್ಲ. ಹಿಂದು ಸಂಪ್ರದಾಯದಂತೆ ಹೆತ್ತವರು ನಿಧನರಾದಾಗ ಪುತ್ರನೊಬ್ಬ ತನ್ನ ತಲೆ ಮತ್ತುಗಡ್ಡ ಬೋಳಿಸಬೇಕು, ಆದರೆ ತಮ್ಮ ತಾಯಿ ಮೃತಪಟ್ಟಾಗ ಮೋದಿ ಹಾಗೆ ಮಾಡಿಲ್ಲ,” ಎಂದು ಲಾಲು ಹೇಳಿದ್ದರು.

ಇದಕ್ಕೆ ಪ್ರತ್ಯುತ್ತರವೆಂಬಂತೆ ಸೋಮವಾರ ನಡೆದ ರ್ಯಾಲಿಯಲ್ಲಿ ಮೋದಿ ಮಾತನಾಡಿ “ಅವರ ವಂಶಾಡಳಿತ ರಾಜಕಾರಣವನ್ನು ನಾನು ಪ್ರಶ್ನಿಸುತ್ತೇನೆ. ಮೋದಿಗೆ ಕುಟುಂಬವಿಲ್ಲ ಎಂದು ಅವರು ಹೇಳುತ್ತಾರೆ. ನನ್ನ ಜೀವನ ತೆರೆದ ಪುಸ್ತಕ, ನಾನು ದೇಶಕ್ಕಾಗಿ ಜೀವಿಸುತ್ತೇನೆ,” ಎದು ಮೋದಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News