ಉಪವಾಸ ನಿರತ ಹೋರಾಟಗಾರರನ್ನು ಪ್ರಧಾನಿ ಭೇಟಿ ಮಾಡಿ, ಮೀಸಲಾತಿ ಸಮಸ್ಯೆ ಬಗೆಹರಿಸಬೇಕು: ಉದ್ಧವ್ ಠಾಕ್ರೆ

Update: 2023-10-26 20:22 IST
ಉಪವಾಸ ನಿರತ ಹೋರಾಟಗಾರರನ್ನು ಪ್ರಧಾನಿ ಭೇಟಿ ಮಾಡಿ, ಮೀಸಲಾತಿ ಸಮಸ್ಯೆ ಬಗೆಹರಿಸಬೇಕು: ಉದ್ಧವ್ ಠಾಕ್ರೆ

X//@f UddhavThackeray

  • whatsapp icon

ಮುಂಬೈ: ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಂಗೆ ಅವರನ್ನು ಭೇಟಿ ಮಾಡಿ, ಆ ಸಮುದಾಯದ ಮೀಸಲಾತಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿವಸೇನೆ(ಉದ್ಧವ್ ಠಾಕ್ರೆ ಬಣ)ಯ ಮುಖ್ಯಸ್ಥ ಉದ್ಧವ್ ಠಾಕ್ರೆ ಗುರುವಾರ ಆಗ್ರಹಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮರಾಠ ಮೀಸಲಾತಿ ಕಲ್ಪಿಸಬೇಕು ಎಂದು ಜಲ್ನಾ ಜಿಲ್ಲೆಯಲ್ಲಿ ಜರಂಗೆಯು ಆಮರಣಾಂತ ಉಪವಾಸ ಕೈಗೊಂಡ ಮರುದಿನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಉದ್ಧವ್ ಠಾಕ್ರೆ ಮೇಲಿನಂತೆ ಆಗ್ರಹಿಸಿದ್ದಾರೆ.

ಇದಕ್ಕೂ ಮುನ್ನ, ಮಂಗಳವಾರ ತಮ್ಮ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದಸರಾ ಸಮಾವೇಶದಲ್ಲಿ ವೇದಿಕೆಯ ಮೇಲೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ನಮಿಸಿದ ನಂತರ, ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಶಪಥ ಮಾಡಿದ್ದರು.

ಈ ಕುರಿತು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ, “ಶಪಥ ಮಾಡಿ, ನಂತರ ವಿಳಂಬ ತಂತ್ರ ಅನುಸರಿಸುವುದು ಸೂಕ್ತ ಮಾರ್ಗವಲ್ಲ” ಎಂದು ಕಿಡಿ ಕಾರಿದ್ದಾರೆ.

“ಮರಾಠ ಮೀಸಲಾತಿ ಕಲ್ಪಿಸಲು ಯಾವ ಮಾರ್ಗವಿದೆ ಎಂಬುದನ್ನು ಸರ್ಕಾರ ಮರಾಠ ಮೀಸಲಾತಿ ಹೋರಾಟಗಾರರಿಗೆ ತಿಳಿಸಬೇಕು. ಒಂದು ವೇಳೆ ಮೀಸಲಾತಿ ಕಲ್ಪಿಸಲು ಮಾರ್ಗವಿದ್ದರೆ ಸರ್ಕಾರವೇಕೆ ಸಮಸ್ಯೆಯನ್ನು ಪರಿಹರಿಸುತ್ತಿಲ್ಲ” ಎಂದು ಅವರು ಪ್ರಶ‍್ನಿಸಿದ್ದಾರೆ.

“ನಾನು ಪ್ರಧಾನಿಯನ್ನು ಸ್ವಾಗತಿಸುತ್ತೇನೆ. ಆದರೆ, ಅವರು ಜರಂಗೆ ಅವರನ್ನು ಭೇಟಿ ಮಾಡಿ, ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಷಯವನ್ನು ಬಗೆಹರಿಸಬೇಕು” ಎಂದೂ ಅವರು ಆಗ್ರಹಿಸಿದ್ದಾರೆ.

ಮರಾಠ ಮೀಸಲಾತಿ ಹೋರಾಟದ ನಾಯಕರಾಗಿ ಜರಂಗೆ ಹೊರಹೊಮ್ಮಿದ್ದು, ಬುಧವಾರ ಜಲ್ನಾ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮ ಅಂತರ್ವಾಲಿ ಸಾರಥಿಯಲ್ಲಿ ಆಮರಣಾಂತ ಉಪವಾಸ ಕೈಗೊಂಡಿದ್ದಾರೆ. ಇದಕ್ಕೂ ಮುನ್ನ ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಮಹಾರಾಷ್ಟ್ರ ಸರ್ಕಾರಕ್ಕೆ 40 ದಿನಗಳ ಗಡುವು ನೀಡಿ ಜರಂಗೆ ನಡೆಸಿದ್ದ ಉಪವಾಸ ಸತ್ಯಾಗ್ರಹವು ಅ.24ರಂದು ಅಂತ್ಯಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News