ಎಲ್ಲ ಇಲಾಖಾ ಮುಖ್ಯಸ್ಥರೂ ಪ್ರಧಾನಿ ಮೋದಿಯ ‘ಮನ್ ಕಿ ಬಾತ್’ ಅನ್ನು ಕಡ್ಡಾಯವಾಗಿ ಆಲಿಸಬೇಕು: ಗೋವಾ ಸರಕಾರ ಆದೇಶ

Update: 2025-01-09 13:47 GMT

ನರೇಂದ್ರ ಮೋದಿ | PC : PTI 

ಪಣಜಿ: ತನ್ನ ಎಲ್ಲ ಇಲಾಖಾ ಮುಖ್ಯಸ್ಥರೂ ಪ್ರಧಾನಿ ನರೇಂದ್ರ ಮೋದಿಯ ರೇಡಿಯೊ ಪ್ರಸಾರವಾದ ‘ಮನ್ ಕಿ ಬಾತ್’ ಅನ್ನು ಕಡ್ಡಾಯವಾಗಿ ಆಲಿಸಬೇಕು ಎಂದು ಗೋವಾ ಬಿಜೆಪಿ ಸರಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ಗುರುವಾರ ಗೋವಾ ಸರಕಾರದ ಅಧೀನ ಕಾರ್ಯದರ್ಶಿ (ಸಾಮಾನ್ಯ ಆಡಳಿತ) ಶ್ರೇಯಸ್ ಡಿಸಿಲ್ವಾ ಸುತ್ತೋಲೆ ಹೊರಡಿಸಿದ್ದು, ಎಲ್ಲ ಇಲಾಖಾ ಮುಖ್ಯಸ್ಥರೂ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಆಲಿಸಬೇಕು ಹಾಗೂ ಆ ಕಾರ್ಯಕ್ರಮದ ಸಲಹೆಗಳು ಹಾಗೂ ಅದರಲ್ಲಿ ಉಲ್ಲೇಖವಾಗುವ ಉತ್ತಮ ಅಭ್ಯಾಸಗಳಿಂದ ಸ್ಫೂರ್ತಿ ಪಡೆಯಬೇಕು ಎಂದು ಆದೇಶಿಸಲಾಗಿದೆ.

ಈ ಸುತ್ತೋಲೆಯನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್, “ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೊ ಕಾರ್ಯಕ್ರಮವಾದ ‘ಮನ್ ಕಿ ಬಾತ್’ ಆಡಳಿತದ ಕುರಿತು ನಾಗರಿಕರ ಚಿಂತನೆಗಳು ಹಾಗೂ ಯೋಜನೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಅಲ್ಲದೆ, ವೈಯಕ್ತಿಕ ಹಾಗೂ ಒಟ್ಟಾದ ಪ್ರಯತ್ನಗಳ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣವಾಗುವುದನ್ನು ಎತ್ತಿ ಹಿಡಿಯುತ್ತದೆ” ಎಂದು ಹೇಳಿದ್ದಾರೆ. ಆಡಳಿತವನ್ನು ಸುಧಾರಿಸಲು ಕಾರ್ಯಕ್ರಮದ ವೇಳೆ ಪ್ರಸ್ತಾಪಿಸಲಾಗುವ ಯಶಸ್ಸಿನ ಕತೆಗಳು ಹಾಗೂ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದೂ ಅವರು ಸಲಹೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News