ಅಶ್ಲೀಲ ವಿಡಿಯೊ ನಿರ್ಮಾಣ ಪ್ರಕರಣ: ರಾಜ್ ಕುಂದ್ರಾ ನಿವಾಸದ ಮೇಲೆ ಈಡಿ ದಾಳಿ

Update: 2024-11-29 08:56 GMT

ರಾಜ್ ಕುಂದ್ರಾ | PC : X \ @onlyrajkundra

ಮುಂಬೈ: ಮೊಬೈಲ್ ಆ್ಯಪ್ ಗಳ ಮೂಲಕ ಅಶ್ಲೀಲ ವಿಡಿಯೊ ನಿರ್ಮಿಸಿ, ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಇಂದು ಉದ್ಯಮಿ ರಾಜ್ ಕುಂದ್ರಾರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ರಾಜ್ ಕುಂದ್ರಾರ ಜುಹು ನಿವಾಸ ಸೇರಿದಂತೆ 15 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯಾಚರಣೆ ನಡೆಸಿದೆ.

ಸದ್ಯ ನಿಷ್ಕ್ರಿಯಗೊಂಡಿರುವ ‘ಹಾಟ್ ಶಾಟ್ಸ್’ ಆ್ಯಪ್ ಮೂಲಕ ವಯಸ್ಕರ ದೃಶ್ಯಾವಳಿಗಳನ್ನು ಪ್ರಸಾರ ಮಾಡುವ ಮೂಲಕ ಹಣ ಮಾಡುವ ಯೋಜನೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಪ್ರಮುಖ ಪಾಲುದಾರ ಎಂಬ ಆರೋಪಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ, ಹಲವಾರು ತಿಂಗಳಿನಿಂದ ಜಾರಿ ನಿರ್ದೇಶನಾಲಯ ಅವರ ಮೇಲೆ ಕಣ್ಣಿಟ್ಟಿತ್ತು. ಈ ಮುನ್ನ, ಆ್ಯಪಲ್ ಮತ್ತು ಗೂಗಲ್ ಪ್ಲೇಯಂತಹ ವೇದಿಕೆಗಳಲ್ಲಿ ಲಭ್ಯವಿದ್ದ ಈ ಆ್ಯಪ್ ಅನ್ನು ಸಾರ್ವಜನಿಕರ ಆಕ್ರೋಶ ಹಾಗೂ ಕಾನೂನು ಕ್ರಮಗಳ ನಂತರ ತೆಗೆದು ಹಾಕಲಾಗಿತ್ತು.

ರಾಜ್ ಕುಂದ್ರಾ ತಮ್ಮ ಕಂಪನಿ ಆರ್ಮ್ಸ್ ಪ್ರೈಮ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನು ಬಳಸಿಕೊಂಡು, ಈ ಆ್ಯಪ್ ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಆರೋಪಿಸಲಾಗಿದೆ. ಈ ಆ್ಯಪ್ ಅನ್ನು ಬ್ರಿಟನ್ ಮೂಲದ ಕೆನ್ರಿನ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಮಾರಾಟ ಮಾಡುವುದನ್ನು ಆರ್ಮ್ಸ್ ಪ್ರೈಮ್ ಕಂಪನಿ ವ್ಯವಸ್ಥೆಗೊಳಿಸಿದ್ದು, ಆ ಸಂಸ್ಥೆಯು ವಯಸ್ಕ ದೃಶ್ಯಾಶವಳಿಗಳನ್ನು ಅಪ್ಲೋಡ್ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದೂ ಜಾರಿ ನಿರ್ದೇಶನಾಲಯ ದೂರಿದೆ.

ವೆಬ್ ಸೀರೀಸ್ ಆಡಿಶನ್ ಸೋಗಿನಲ್ಲಿ ಆಕಾಂಕ್ಷಿ ನಟರಿಗೆ ಈ ಆ್ಯಪ್ ಆಮಿಷ ಒಡ್ಡಿದೆ ಎಂದು ಆರೋಪಿಸಲಾಗಿದೆ. ಆದರೆ, ನಂತರದಲ್ಲಿ ಆ ನಟರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಅರೆ-ನಗ್ನ ಅಥವಾ ನಗ್ನ ದೃಶ್ಯ್ಗಳಲ್ಲಿ ಪಾಲ್ಗೊಳ್ಳುವಂತೆ ಒತ್ತಡ ಹೇರಲಾಗಿದೆ ಎಂದು ಹೇಳಲಾಗಿದೆ. 119 ವಯಸ್ಕ ಚಿತ್ರಗಳನ್ನು 1.2 ದಶಲಕ್ಷ ಡಾಲರ್ ಗೆ ಮಾರಾಟ ಮಾಡುವ ಚರ್ಚೆಯೂ ಸೇರಿದಂತೆ ಕೆನ್ರಿನ್ ನಡುವೆ ಹಣಕಾಸು ವಹಿವಾಟು ನಡೆದಿರುವುದಕ್ಕೆ ಸಾಕ್ಷಿಯಾಗಿ ರಾಜ್ ಕುಂದ್ರಾರ ಮೊಬೈಲ್ ಫೋನ್ ವಾಟ್ಸ್ ಆ್ಯಪ್ ಚಾಟ್ ಗಳನ್ನು ಒಳಗೊಂಡಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿರುವ ರಾಜ್ ಕುಂದ್ರಾ, ವಯಸ್ಕ ದೃಶ್ಯಾಂವಳಿಗಳ ನಿರ್ಮಾಣದಲ್ಲಿ ನನ್ನ ಯಾವುದೇ ಸಕ್ರಿಯ ಪಾಲುದಾರಿಕೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದ್ದು, ಈ ಪ್ರಕರಣದಲ್ಲಿ ನನ್ನನ್ನು ಬಲಿಪಶುವನ್ನಾಗಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News