ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಸಮರಕ್ಕಾಗಿ ಸಂಸತ್ತಿನ ವಿಶೇಷ ಅಧಿವೇಶನದ ಸಾಧ್ಯತೆ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ನಿರ್ಣಯವನ್ನು ಅಂಗೀಕರಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವಂತೆ ಖ್ಯಾತ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ನೀಡಿರುವ ಸಲಹೆಯನ್ನು ನರೇಂದ್ರ ಮೋದಿ ಸರಕಾರವು ಪರಿಗಣಿಸುವ ನಿರೀಕ್ಷೆಯಿದೆ, ಏಕೆಂದರೆ ಇಂತಹ ನಿರ್ಣಯವು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸರಕಾರದ ಬೆನ್ನಿಗೆ ನಿಂತಿರುವ ಎಲ್ಲ ಪಕ್ಷಗಳೊಂದಿಗೆ ಒಕ್ಕಟ್ಟನ್ನು ಇನ್ನಷ್ಟು ಬಲಗೊಳಿಸುತ್ತದೆ.
ಸರಕಾರವು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವಂತೆ ಸಿಬಲ್ ಶುಕ್ರವಾರ ಸರಕಾರವನ್ನು ಆಗ್ರಹಿಸಿದ್ದರು. ಇದು ಸರಕಾರದ ಗಮನಕ್ಕೆ ಅರ್ಹವಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿಯವರು ಸದಾ, ವಿಶೇಷವಾಗಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಬಿಕ್ಕಟ್ಟು ಉದ್ಭವಿಸಿದಾಗೆಲ್ಲ ಸಾಮೂಹಿಕ ಒಗ್ಗಟ್ಟಿನೊಂದಿಗೆ ರಾಷ್ಟ್ರಕ್ಕಾಗಿ ಕಾರ್ಯ ನಿರ್ವಹಿಸುವ ಗುರಿಯನ್ನು ಹೊಂದಿರುವುದರಿಂದ ಸಿಬಲ್ ಸಲಹೆಯ ಪರಿಗಣನೆಯನ್ನು ನಿರೀಕ್ಷಿಸಬಹುದು ಎಂದು ಹಿರಿಯ ಬಿಜೆಪಿ ಪದಾಧಿಕಾರಿಯೋರ್ವರು ಹೇಳಿದರು.
ಸಾಮಾನ್ಯವಾಗಿ, ಹಲವಾರು ಸಚಿವರನ್ನು ಒಳಗೊಂಡಿರುವ ಸಂಸದೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು ತುರ್ತು ಸಂದರ್ಭದ ಮೌಲ್ಯಮಾಪನ ನಡೆಸಿ ವಿಶೇಷ ಅಧಿವೇಶನದ ದಿನಾಂಕವನ್ನು ನಿರ್ಧರಿಸುತ್ತದೆ ಮತ್ತು ನಂತರ ರಾಷ್ಟ್ರಪತಿಗಳು ಅದನ್ನು ಅನುಮೋದಿಸುತ್ತಾರೆ.ಅಲ್ಪಾವಧಿಯ ನೋಟಿಸ್‌ನೊಂದಿಗೆ ವಿಶೇಷ ಅಧಿವೇಶನವನ್ನು ಕರೆಯಬಹುದು ಎಂದು ಎಂದು ತಿಳಿಸಿದ ಮೂಲಗಳು, 1962ರಲ್ಲಿ ಚೀನಾದೊಂದಿಗೆ ಯುದ್ಧದ ಸಂದರ್ಭದಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವು ಸಂಸತ್ತಿನ ವಿಶೇಷ ಅಧಿವೇಶನ ಕರೆದಿದ್ದನ್ನು ನೆನಪಿಸಿದವು.
ವಿಶೇಷ ಸಂಸತ್ ಅಧಿವೇಶನದ ತರ್ಕಬದ್ಧತೆಯನ್ನು ವಿವರಿಸಿದ ಮೂಲಗಳು,ಭಯೋತ್ಪಾದನೆ ಮತ್ತು ತೆರೆಮರೆಯ ಹಿಂದಿನಿಂದ ಕಾರ್ಯಾಚರಿಸುತ್ತಿರುವ ದೇಶದ ವಿರುದ್ಧ ಸರಕಾರವು ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದನ್ನು ಪ್ರತಿಪಕ್ಷಗಳು ಬೆಂಬಲಿಸಿವೆ. ಆದರೆ ನಿರ್ಣಯವನ್ನು ಅಂಗೀಕರಿಸಲು ಶೀಘ್ರವೇ ವಿಶೇಷ ಅಧಿವೇಶನವನ್ನು ಕರೆದರೆ ಅದು ಪಾಕಿಸ್ತಾನಕ್ಕೆ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಹೊಡೆತ ನೀಡುತ್ತದೆ ಎಂದು ಹೇಳಿದವು.
ಸಿಬಲ್ ಸಲಹೆಗೆ ಸಂಬಂಧಿಸಿದಂತೆ ಶೀಘ್ರವೇ ನಿರ್ಧಾರವನ್ನು ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ ಹಿರಿಯ ಬಿಜೆಪಿ ನಾಯಕರೋರ್ವರು,‘ರಾಷ್ಟ್ರಪತಿಗಳು ರೋಮ್‌ನಿಂದ ಮರಳಿದ ಬಳಿಕ ಸಿಬಲ್ ಸಲಹೆಯು ಗಮನವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ಮೋದಿಯವರು ರಾಷ್ಟ್ರೀಯ ಹಿತಾಸಕ್ತಿಯಿಂದ ಕೂಡಿದ ಪ್ರಜಾಸತ್ತಾತ್ಮಕ ಮತ್ತು ಅರ್ಥಪೂರ್ಣ ಸಲಹೆಗಳನ್ನು ಸದಾ ಸ್ವಾಗತಿಸುವುದರಿಂದ ಮುಂದಿನ ದಿನಗಳಲ್ಲಿ ಈ ಸಲಹೆಯ ಬಗ್ಗೆ ನಾವು ಭರವಸೆ ಹೊಂದಿರಬೇಕು’, ಎಂದರು.