ಜೈಪುರ ಮಸೀದಿಯ ಬಳಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾದ ಪೋಸ್ಟರ್; ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್

Update: 2025-04-26 12:21 IST
ಜೈಪುರ ಮಸೀದಿಯ ಬಳಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾದ ಪೋಸ್ಟರ್; ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್

Photo:X/@ANI

  • whatsapp icon

ಜೈಪುರ: ಶುಕ್ರವಾರ ರಾತ್ರಿ 'ಪಾಕಿಸ್ತಾನ್ ಮುರ್ದಾಬಾದ್' ಹಾಗೂ ಇನ್ನಿತರ ಆಕ್ಷೇಪಾರ್ಹ ಘೋಷಣೆಗಳನ್ನೊಳಗೊಂಡ ಪೋಸ್ಟರ್‌ಗಳು ಜೋಹ್ರಿ ಬಝಾರ್‌ನಲ್ಲಿರುವ ಜಾಮಾ ಮಸೀದಿಯ ಹೊರಗೆ ಕಂಡು ಬಂದಿದ್ದರಿಂದ ಜೈಪುರದ ಚಾರ್ದಿವಾರಿ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯ ಬೆನ್ನಿಗೇ, ಬಿಜೆಪಿ ನಾಯಕ ಹಾಗೂ ಹವಾಮಹಲ್ ವಿಧಾನಸಭಾ ಕ್ಷೇತ್ರದ ಶಾಸಕ ಬಾಲ್ ಮುಕುಂದ್ ಆಚಾರ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಶುಕ್ರವಾರ ರಾತ್ರಿ ಸುಮಾರು 8.30ರ ವೇಳೆಗೆ ಬಿಜೆಪಿ ಶಾಸಕ ಬಾಲ್ ಮುಕುಂದ್ ಆಚಾರ್ಯ ಹಾಗೂ ಇನ್ನಿತರರು ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆದರೆ, ಈ ಪ್ರತಿಭಟನೆಯ ವೇಳೆ ಕೆಲವು ವ್ಯಕ್ತಿಗಳು ಮಸೀದಿಯ ಆವರಣದಲ್ಲಿ ವಿವಾದಾತ್ಮಕ ಪೋಸ್ಟರ್‌ಗಳನ್ನು ಅಂಟಿಸಿದ್ದರಿಂದ, ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಯಿತು ಎಂದು ವರದಿಯಾಗಿದೆ.

ಮಸೀದಿಯ ಆವರಣದಲ್ಲಿ ಈ ವಿವಾದಾತ್ಮಕ ಪೋಸ್ಟರ್‌ಗಳು ಕಂಡು ಬಂದಿದ್ದರಿಂದ ಆಕ್ರೋಶಗೊಂಡ ಮುಸ್ಲಿಂ ಸಮುದಾಯ, ಜೈಪುರದ ಪ್ರಸಿದ್ಧ ಸ್ಥಳವಾದ ಹವಾ ಮಹಲ್ ಎದುರಿಗಿರುವ ಬಡಿ ಚೌಪಡ್ ಬಳಿ ಪ್ರತಿಭಟನೆ ನಡೆಸಿತು. ಅವರೂ ಕೂಡಾ ಘೋಷಣೆಗಳನ್ನು ಕೂಗಿ, ಪ್ರತಿ ಪೋಸ್ಟರ್‌ಗಳನ್ನೂ ಅಂಟಿಸಿದರು. ಇದರಿಂದಾಗಿ, ಸ್ಥಳದಲ್ಲಿ ಎರಡೂ ಗುಂಪುಗಳ ನಡುವೆ ಒಂದಿಷ್ಟು ಹೊತ್ತು ಪರಸ್ಪರ ಘರ್ಷಣೆ ಕೂಡಾ ನಡೆಯಿತು.

ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಕಾಂಗ್ರೆಸ್ ಶಾಸಕರಾದ ರಫೀಕ್ ಖಾನ್ ಹಾಗೂ ಅಮೀನ್ ಕಾಗ್ಝಿ ಪರಿಸ್ಥಿತಿಯನ್ನು ಶಮನಗೊಳಿಸಿದರು. ಕೆಲವರು ತಮ್ಮ ಪಾದರಕ್ಷೆಗಳನ್ನೂ ಕಳಚದೆ ಮಸೀದಿಯ ಆವರಣದೊಳಗೆ ಪ್ರವೇಶಿಸಿ, ಪೋಸ್ಟರ್‌ಗಳನ್ನು ಅಂಟಿಸಿದ್ದರಿಂದ, ಪರಿಸ್ಥಿತಿ ಮತ್ತಷ್ಟು ಪ್ರಕ್ಷುಬ್ಧಗೊಳ್ಳಲು ಕಾರಣವಾಯಿತು ಎಂದು ಮುಸ್ಲಿಂ ಸಮುದಾಯ ಆರೋಪಿಸಿದೆ. ಅಲ್ಲದೆ, ಮಸೀದಿಯ ಆವರಣದಲ್ಲಿ ಅಂಟಿಸಲಾಗಿದ್ದ ಪೋಸ್ಟರ್ ಒಂದರಲ್ಲಿ ಗಡ್ಡ ಬಿಟ್ಟ ವ್ಯಕ್ತಿಯೊಬ್ಬರ ಚಿತ್ರದೊಂದಿಗೆ, "ಯಾರು ಹೇಳಿದ್ದು ಭಯೋತ್ಪಾದನೆಗೆ ಧರ್ಮವಿಲ್ಲವೆಂದು?" ಎಂಬ ವಿವಾದಾತ್ಮಕ ಘೋಷಣೆಯನ್ನೂ ಮುದ್ರಿಸಲಾಗಿತ್ತು ಎನ್ನಲಾಗಿದೆ.

ಈ ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ.

ಶಾಸಕ ಬಾಲ್ ಮುಕುಂದ್ ಆಚಾರ್ಯ ಧಾರ್ಮಿಕ ಭಾವನೆಗಳನ್ನು ಉದ್ರೇಕಿಸುತ್ತಿದ್ದಾರೆ ಹಾಗೂ ಕೋಮು ಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮುಸ್ಲಿಂ ಸಮುದಾಯದ ಪ್ರತಿಭಟನಾಕಾರರು ಆರೋಪಿಸಿದರು. ಇದರ ಬೆನ್ನಿಗೇ, ಶಾಸಕ ಲಾಲ್ ಮುಕುಂದ್ ಆಚಾರ್ಯ ವಿರುದ್ಧ ಮಾನಕ್ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಸೀದಿಯ ಧ್ವನಿವರ್ಧಕದ ಮೂಲಕ ಎಫ್‌ಐಆರ್ ದಾಖಲಾಗಿರುವ ಸಂಗತಿಯನ್ನು ಅಧಿಕೃತವಾಗಿ ಪ್ರಕಟಿಸಿದ ನಂತರವಷ್ಟೆ ಸ್ಥಳದಿಂದ ಜನಜಂಗುಳಿ ಚದುರಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News