ಬಾಹ್ಯಾಕಾಶದಲ್ಲಿ ಅವಶೇಷಗಳು ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರಪತಿ ಮುರ್ಮು ಕಳವಳ

Update: 2024-08-23 16:08 GMT

PC : PTI 

ಹೊಸದಿಲ್ಲಿ: ಹಲವಾರು ಉಪಗ್ರಹಗಳನ್ನು ಕಕ್ಷೆಯಲ್ಲಿ ಇರಿಸಲಾಗುತ್ತಿರುವುದರಿಂದ ಬಾಹ್ಯಾಕಾಶದಲ್ಲಿ ಅವಶೇಷಗಳು ಹೆಚ್ಚುತ್ತಿರುವ ಬಗ್ಗೆ ಶುಕ್ರವಾರ ಕಳವಳಗಳನ್ನು ವ್ಯಕ್ತಪಡಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು,2030ರ ವೇಳೆಗೆ ತನ್ನ ಬಾಹ್ಯಾಕಾಶ ಯೋಜನೆಗಳನ್ನು ಅವಶೇಷ ಮುಕ್ತಗೊಳಿಸುವ ಗುರಿಯನ್ನು ಹೊಂದಿರುವುದಕ್ಕಾಗಿ ಇಸ್ರೋವನ್ನು ಪ್ರಶಂಸಿಸಿದರು.

ಭಾರತದ ಚಂದ್ರಯಾನ-3 ಯೋಜನೆಯು ಯಶಸ್ವಿಗೊಂಡ ಪ್ರಥಮ ವರ್ಷಾಚರಣೆಯ ಅಂಗವಾಗಿ ದಿಲ್ಲಿಯ ಭಾರತ ಮಂಟಪ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಚೊಚ್ಚಲ ರಾಷ್ಟ್ರೀಯ ಬಾಹ್ಯಾಕಾಶ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಮುರ್ಮು, ಬಾಹ್ಯಾಕಾಶದಲ್ಲಿರುವ ಅವಶೇಷಗಳು ಅಂತರಿಕ್ಷ ಅಭಿಯಾನಗಳಿಗೆ ಸಮಸ್ಯೆಗೆ ಕಾರಣವಾಗಬಲ್ಲವು ಎಂದು ಹೇಳಿದರು.

ಬಾಹ್ಯಾಕಾಶ ಸಂಶೋಧನಾ ಚಟುವಟಿಕೆಗಳ ನಿರಂತರ ಪ್ರಗತಿಯನ್ನು ಖಚಿತಪಡಿಸುವ ಸುರಕ್ಷಿತ ಮತ್ತು ಸುಸ್ಥಿರ ಕಾರ್ಯಾಚರಣೆಗಳ ನಿರ್ವಹಣೆಗಾಗಿ ಇಸ್ರೋ ವ್ಯವಸ್ಥೆಯನ್ನು ಅವರು ಪ್ರಶಂಸಿಸಿದರು.

ಇಸ್ರೋ ಬಾಹ್ಯಾಕಾಶದಲ್ಲಿ ಗಣನೀಯ ಸಾಧನೆಗಳನ್ನು ಮಾಡಿದೆ ಹಾಗೂ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದೆ ಎಂದು ಹೇಳಿದ ಮುರ್ಮು,ಕಡಿಮೆ ಸಂಪನ್ಮೂಲಗಳನ್ನು ಬಳಸಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ವಿಶ್ವದಲ್ಲಿ ಅತ್ಯುತ್ತಮ ಬಾಹ್ಯಾಕಾಶ ಸಾಧನೆಗಳ ಸಾಲಿಗೆ ಸೇರಿಸಿದ್ದಕ್ಕಾಗಿ ಇಸ್ರೋ ವಿಜ್ಞಾನಿಗಳ್ನು ಅಭಿನಂದಿಸಿದರು.

ದೇಶವು ಬಾಹ್ಯಾಕಾಶ ವಿಜ್ಞಾನದಲ್ಲಿ ನಿರಂತರ ಪ್ರಗತಿಯನ್ನು ಮಾಡಲಿದೆ ಮತ್ತು ಶ್ರೇಷ್ಠತೆಯ ಹೊಸ ಮಾನದಂಡಗಳನ್ನು ಸ್ಥಾಪಿಸುವುದನ್ನು ಮುಂದುವರಿಸಲಿದೆ ಎಂಬ ವಿಶ್ವಾಸವನ್ನು ರಾಷ್ಟ್ರಪತಿಗಳು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅವರು ರೋಬಾಟಿಕ್ಸ್ ಚಾಲೆಂಜ್ ಮತ್ತು ಭಾರತೀಯ ಅಂತರಿಕ್ಷ ಹ್ಯಾಕ್ಥಾನ್ ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News